ಬೆಳಗಾವಿ: ಭಾಷೆ ಹಾಗೂ ಗಡಿಯ ವಿಚಾರಗಳು ಬಂದಾಗ ಕನ್ನಡಪರ ಸಂಘಟನೆ ಹಾಗೂ ಎಂಇಎಸ್, ಶಿವಸೇನೆಯ ನಡುವೆ ಸದಾ ಒಂದಿಲ್ಲೊಂದು ತಿಕ್ಕಾಟ ಶುರುವಾಗುತ್ತದೆ. ಸದ್ಯ ಇಲ್ಲಿನ ಮಚ್ಚೆ ಪಟ್ಟಣ ಪಂಚಾಯತಿ ಬಳಿ ಕೆಲ ಯುವಕರು ಹಾಗೂ ಕನ್ನಡಪರ ಸಂಘಟನೆಯ ಕಾರ್ಯಕರ್ತರು, ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು (Sangolli Rayanna Statue) ಪ್ರತಿಷ್ಠಾಪನೆ ಮಾಡಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಈ ಸ್ಥಳದಲ್ಲಿ ಮೊದಲು ಯಾವುದೇ ಪ್ರತಿಮೆ ಇರಲಿಲ್ಲ. ಮಚ್ಚೆ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಲುಗಿ ಕನ್ನಡಪರ ಸಂಘಟನೆಗಳೂ ಸೇರಿ ಗ್ರಾಮದ ಯುವಕರು ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ಯುವಕರು ಮತ್ತು ಕನ್ನಡಪರ ಸಂಘಟನೆಗಳು ಅಧಿಕಾರಿಗಳ ವರ್ತನೆಯಿಂದ ರೋಸಿ ಹೋಗಿ ಭಾನುವಾರ (ಜೂ.4) ರಾತ್ರಿ ಏಕಾಏಕಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾನೆ ಮಾಡಿದ್ದಾರೆ. ಮರಾಠಿಗರೂ ಸಹ ಜೀಜಾಬಾಯಿ ಹಾಗೂ ಶಿವಾಜಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿಕೊಳ್ಳಲಿ ಎಂದು ಕನ್ನಡಪರ ಸಂಘಟನೆಗಳು ತಿರುಗೇಟು ನೀಡಿದ್ದಾರೆ.
ಪ್ರತಿಮೆಗೆ ಹಾಲಿನ ಅಭಿಷೇಕ
ಸೋಮವಾರ ಬೆಳಗ್ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪೂಜೆಯನ್ನು ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಪ್ರತಿಮೆಯನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿ,
ನಂತರ ಹಾಲಿನ ಅಭಿಷೇಕ ಮಾಡಿದ್ದಾರೆ. ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದ್ದಾರೆ.
ಬಿಗಿ ಪೊಲೀಸ್ ಭದ್ರತೆ
ಮೂರ್ತಿ ಪ್ರತಿಷ್ಠಾಪನೆ ವಿಷಯ ತಿಳಿಯುತ್ತಿದ್ದಂತೆ ಮಚ್ಚೆ ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ನಗರದ ಡಿಸಿಪಿ ಎಚ್.ಟಿ ಶೇಕರ್ ನೇತೃತ್ವದಲ್ಲಿ ಒಂದು ಕೆಎಸ್ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: Karnataka Budget 2023: ಜುಲೈ 7ಕ್ಕೆ ರಾಜ್ಯ ಬಜೆಟ್; ಸಿದ್ದರಾಮಯ್ಯ ಮುಂದಿರುವ ಸವಾಲೇನು?
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಪರಿಸ್ಥಿತಿ ಅವಲೋಕಿಸಿ ಗ್ರಾಮಸ್ಥರಿಗೆ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ರಾತೋರಾತ್ರಿ ಪ್ರತಿಷ್ಠಾಪಿಸಲಾಗಿದ್ದ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಬಟ್ಟೆ ಕಟ್ಟಿ, 2 ದಿನದೊಳಗೆ ಪ್ರಕರಣವನ್ನು ನೀವೇ ಇತ್ಯರ್ಥ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ