ಬೆಂಗಳೂರು: 56ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಗಾಂಧಿನಗರ 3ನೇ ಮುಖ್ಯರಸ್ತೆಯ ಸಪ್ನ ಬುಕ್ ಹೌಸ್‌ನಲ್ಲಿ (Sapna Book House) ʼಪುಸ್ತಕ ಸುಗ್ಗಿʼ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಮೆಗಾ ಜಾತ್ರೆಗೆ ಜ.26ರಂದು ಚಾಲನೆ ಸಿಗಲಿದೆ. ಕಾರ್ಯಕ್ರಮದ ಭಾಗವಾಗಿ ʼಅಕ್ಷರ ಸುಗ್ಗಿ ಮಾತಿನ ಹುಗ್ಗಿ; ಕವಿತೆ, ಆತ್ಮಕತೆ, ಮಾತುಕತೆʼ ಎಂಬ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಕನ್ನಡದ ಪ್ರಸಿದ್ಧ ಲೇಖಕರು, ಪುಸ್ತಕ ಪ್ರೇಮಿಗಳು ಉಪಸ್ಥಿತರಿರಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ʼಅಕ್ಷರ ಸುಗ್ಗಿ ಮಾತಿನ ಹುಗ್ಗಿ; ಕವಿತೆ, ಆತ್ಮಕತೆ, ಮಾತುಕತೆʼ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂವಾದಕರಾದ ಆರ್. ದೊಡ್ಡಗೌಡ, ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಪ್ರಸಿದ್ಧ ಲೇಖಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಕಲಬುರಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾದ ಡಾ. ಎಚ್.ಟಿ. ಪೋತೆ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ | Chamarajapete maidan | ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸರ್ಕಾರ ಗ್ರೀನ್ ಸಿಗ್ನಲ್
ಕಾದಂಬರಿಕಾರ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಕವಯಿತ್ರಿ, ಪತ್ರಕರ್ತೆ ವಿದ್ಯಾರಶ್ಮಿ, ಕಥೆಗಾರ ದಾದಾಪೀರ್ ಜೈಮನ್, ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ, ಗುಲ್ಬರ್ಗಾ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ಶ್ರೀಶೈಲ ನಾಗರಾಳ, ವರ್ತೂರಿನ ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ. ಸಿ. ಚಂದ್ರಪ್ಪ, ಲೇಖಕರಾದ ಜಗದೀಶ ಶರ್ಮಾ ಸಂಪ, ಮಾಕೋನನಹಳ್ಳಿ ವಿನಯ್ ಮಾಧವ್, ಕನ್ನಡಪ್ರಭ ಉಪ ಸುದ್ದಿ ಸಂಪಾದಕ ಮಹಾಬಲ ಸೀತಾಳಭಾವಿ ಭಾಗವಹಿಸಲಿದ್ದಾರೆ.
1967ರಲ್ಲಿ ಆರಂಭವಾದ ಸಪ್ನಾ ಬುಕ್ ಹೌಸ್‌ಗೆ ಇದೀಗ 56ನೇ ವಾರ್ಷಿಕೋತ್ಸವ ಸಂಭ್ರಮ. ಕನ್ನಡದ ಓದುಗ ದೊರೆಗಳಿಗೆ ಸಪ್ನಾದ ಎಲ್ಲಾ ಪ್ರಕಟನೆಗಳಿಗೆ ವಿಶೇಷ ರಿಯಾಯಿತಿ ನೀಡುತ್ತಿದ್ದು, ಪುಸ್ತಕಗಳಿಗೆ ಶೇ.10 ರಿಂದ 50ರ ವರೆಗೆ ರಿಯಾಯಿತಿ ಹಾಗೂ ಶೈಕ್ಷಣಿಕ ಪೂರಕ ಪರಿಕರಗಳಿಗೆ ಬಂಪರ್ ಲಿಯಾಯಿತಿ ನೀಡಲಾಗುತ್ತಿದೆ.