ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿ ವಿಭಜನೆಯಾಗಬೇಕು (Divide of Belagavi District) ಎಂಬುದೊಂದು ಕೂಗು ಎದ್ದು ದಶಕಗಳೇ ಆಗಿವೆ. ಆದರೆ ಈ ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿ ವಿವಾದವೂ ಇದ್ದು, ಅದರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ. ಹೀಗಾಗಿ ಬೆಳಗಾವಿ ವಿಭಜನೆ ಅಷ್ಟು ಸುಲಭವಾಗಿಲ್ಲ. 2022ರಲ್ಲಿ ಒಮ್ಮೆ ಬೆಳಗಾವಿ ವಿಭಜನೆ ವಿಚಾರ ಮುನ್ನೆಲೆಗೆ ಬಂದಾಗ ಅಂದು ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರ ಮಾಡುತ್ತೇವೆ’ ಎಂದಿದ್ದರು.
ಈ ಬೆಳಗಾವಿ ವಿಭಜನೆ ಬಗ್ಗೆ ಇಂದು ಮತ್ತೆ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಈ ಸಲ ಬೆಳಗಾವಿ ವಿಭಜನೆ ಆಗಲೇಬೇಕು. ನಾವಿದನ್ನು ಮುಖ್ಯಮಂತ್ರಿ ಬಳಿ ಮಾತನಾಡುತ್ತೇವೆ. ಅವರ ಮೇಲೆ ಒತ್ತಡ ಹೇರುತ್ತೇವೆ. ನಾವಿದನ್ನ ಹಿಂದೆ ನಮ್ಮ ಸರ್ಕಾರ ಇದ್ದಾಗಲೂ ಹೇಳಿದ್ದೇವೆ. ವಿರೋಧ ಪಕ್ಷದಲ್ಲಿದ್ದಾಗಲೂ ಹೇಳಿದ್ದೆವು. ಮತ್ತೆ ಈಗ ಅಧಿಕಾರಕ್ಕೆ ಬಂದಿದ್ದೇವೆ. ಬೆಳಗಾವಿ ವಿಭಜನೆ ಮಾಡಲಾಗುವುದು ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ‘ಬೆಳಗಾವಿ ಜಿಲ್ಲೆ ಚೆನ್ನಾಗಿ ಅಭಿವೃದ್ಧಿಯಾಗಬೇಕು ಎಂದರೆ ವಿಭಜನೆಗೊಳ್ಳಲೇಬೇಕು’ ಎಂದರು.
ಇದನ್ನೂ ಓದಿ: PM Modi: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅಂಬೇಡ್ಕರ್‌ಗೆ ಅಪಮಾನ ಆರೋಪ, ರಾತ್ರೋರಾತ್ರಿ ಉಬ್ಬುಚಿತ್ರ ಅಳವಡಿಕೆ
ಮುಂದುವರಿದು ಮಾತನಾಡಿದ ಸತೀಶ್ ಜಾರಕಿಹೊಳಿ ‘ಬೆಳಗಾವಿ ಜಿಲ್ಲೆ ಆಡಳಿತ ನಡೆಸುವುದು ಅಷ್ಟು ಸುಲಭವಲ್ಲ. ಇಲ್ಲಿ 50 ಲಕ್ಷ ಜನರಿದ್ದಾರೆ. ಆಡಳಿತದ ದೃಷ್ಟಿಯಿಂದ ಬೆಳಗಾವಿ ವಿಭಜನೆಗೊಂಡು, ಗೋಕಾಕ್, ಚಿಕ್ಕೋಡಿ, ಬೆಳಗಾವಿ ಜಿಲ್ಲೆಗಳು ಆಗಲೇಬೇಕು. ಈ ಬಗ್ಗೆ ಸರ್ಕಾರವೇ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಹೇಳಿದರು.