Site icon Vistara News

ಸಾವರ್ಕರ್‌ ಫ್ಲೆಕ್ಸ್‌ ಹರಿದಿದ್ದರಿಂದ ಪಿಎಫ್‌ಐ ಬ್ಯಾನ್‌ ಮಾಡುವ ಸ್ಥಿತಿ ಬಂತು: ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ

ಸಾವರ್ಕರ್

ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ ಅವರು ಅಂದು ಮಾಡಿದ ಬಲಿದಾನ ಇಂದು ಸಮಾಜವನ್ನು ಜಾಗೃತಿಗೊಳಿಸಿದೆ. ಅವರ ಫೋಟೊ ಹರಿಯುವ ಧೈರ್ಯ ಯಾರೂ ಮಾಡಲ್ಲ. ಆದರೆ, ಸಾವರ್ಕರ್ ಫ್ಲೆಕ್ಸ್ ಹರಿದಿದ್ದರಿಂದ ಪಿಎಫ್‌ಐ ಅನ್ನು ಬ್ಯಾನ್ ಮಾಡುವ ಸ್ಥಿತಿ ಬಂತು. ನಮ್ಮ ತಂಟೆಗೆ ಬರುವವರಿಗೆ ಸುಮ್ಮನೆ ಬಿಡಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಎಚ್ಚರಿಕೆ ನೀಡಿದರು.

ಶ್ರೀಗಂಧ ಸಂಸ್ಥೆ ಹಾಗೂ ಸಾಮಗಾನ ಸಂಸ್ಥೆ ವತಿಯಿಂದ ನಗರದ ಸೈನ್ಸ್‌ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ʼಸಾವರ್ಕರ್ ಸಾಮ್ರಾಜ್ಯʼ ಕಾರ್ಯಕ್ರಮದಲ್ಲಿ ಮಾತನಾಡಿ, ಅಂದು ಸಾವರ್ಕರ್‌ಗೆ ಹಿಂಸೆ ನೀಡಲಾಗಿತ್ತು. ಅವರಿಗಾಗಿ ಮಿಡಿಯುತ್ತಿದ್ದವರು ಅಸಹಾಯಕತೆಯಿಂದ ಇದ್ದರು. ಈಗ ಅವರಿಗೆ ಜೈಕಾರ ಹಾಕಲಾಗುತ್ತಿದೆ, ಸ್ವಾತಂತ್ರ್ಯ ಹೋರಾಟಗಾರರ ಕಿಚ್ಚು ಇಂದು ದೇಶದಲ್ಲಿ ಜಾಗೃತಿ ಉಂಟು ಮಾಡಿದೆ ಎಂದರು.

ಕಾಶಿ, ಮಥುರಾ, ಬದ್ರಿನಾಥ್‌ನಂತಹ ಶ್ರದ್ಧಾಕೇಂದ್ರಗಳ ಮೌಲ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿಸುತ್ತಿದ್ದಾರೆ. ಸಾವರ್ಕರ್‌ ಸಾಮ್ರಾಜ್ಯ ಕಾರ್ಯಕ್ರಮದ ಮೂಲಕ ದೇಶ ಭಕ್ತರ ತಂಟೆಗೆ ಹೋಗಲ್ಲ, ದೇಶದ್ರೋಹಿಗಳನ್ನು ಬಿಡಲ್ಲ ಎಂಬ ಸಂದೇಶ ರವಾನೆಯಾಲಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್‌ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್‌ ಮಾತನಾಡಿ, ಹಿಂದೂಗಳು ಒಗ್ಗಟ್ಟಾಗಿರಬೇಕೆಂಬುದು ಸಾವರ್ಕರ್ ಅವರ ಕನಸಾಗಿತ್ತು. ಅವರ ಹಿಂದುತ್ವದ ಮಂತ್ರ ವಾಕ್ಯ ಎಲ್ಲರೂ ಜ್ಞಾಪಕವಿಟ್ಟುಕೊಳ್ಳಬೇಕು. ಭಾರತದ ಮೇಲೆ ಅನೇಕ ಆಕ್ರಮಣಗಳಾಗಿವೆ. ಆದರೆ, ಶಿವಾಜಿ ಮಹಾರಾಜ, ರಾಣಾ ಪ್ರತಾಪ್ ಸಿಂಗ್ ನಂತಹ ಹಲವು ಪರಾಕ್ರಮಿಗಳು ಹಿಂದೂಸ್ಥಾನವನ್ನು ಉಳಿಸಲು ತ್ಯಾಗ, ಬಲಿದಾನ ಮಾಡಿದ್ದಾರೆ. ಸಾವರ್ಕರ್ ಅವರ ಧ್ಯೇಯೋದ್ದೇಶಗಳನ್ನು ನಾಡಿನೆಲ್ಲೆಡೆ ಮತ್ತೆ ಪಸರಿಸಬೇಕಿದೆ ಎಂದು ಹೇಳಿದರು.

ಈಗಲೂ ಅನೇಕ ದುಷ್ಟಶಕ್ತಿಗಳು ದೇಶದ ಮೇಲೆ ಆಕ್ರಮಣ ಮಾಡಲು ಹೊಂಚು ಹಾಕುತ್ತಿವೆ. ಇದನ್ನು ಮೆಟ್ಟಿ ನಿಲ್ಲುವ ಯೋಜನೆಯನ್ನು ನಾವೆಲ್ಲರೂ ರೂಪಿಸಬೇಕಿದೆ. ಶಿವಮೊಗ್ಗದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ತೆರವು ಮಾಡುವ ಮೂಲಕ ಅವಮಾನ ಮಾಡಲಾಗಿತ್ತು. ಇದನ್ನು ಶಿವಮೊಗ್ಗದ ಯುವ ದೇಶ ಪ್ರೇಮಿಗಳು ಮರೆಯಲಿಲ್ಲ. ಈ ಕಾರ್ಯಕ್ರಮದ ಮೂಲಕ ದೇಶಭಕ್ತರನ್ನು ಎಚ್ಚರಿಸುವ ಕೆಲಸವಾಗಿದೆ ಎಂದರು.

ರಾಷ್ಟ್ರೀಯವಾದಿ ಚಿಂತಕಿ ಶ್ರೀಲಕ್ಷ್ಮಿ ಮಾತನಾಡಿ, ಇಲ್ಲಿ ಸಿಡಿದ ಪಟಾಕಿಗಳ ಸದ್ದು ಎಂದೂ ನಿಲ್ಲಲ್ಲ. ಇಲ್ಲಿ ಮೊಳಗಿದ ಸಿಂಹ ಗರ್ಜನೆ ಸಾವರ್ಕರ್ ಫ್ಲೆಕ್ಸ್ ಹರಿದವರಿಗೆ ಕೇಳಬೇಕು. ಬಿಜೆಪಿ ಬಗ್ಗೆ ಸಿಟ್ಟಿದ್ದರೆ ಅದರ ವಿರುದ್ಧ ಟೀಕೆ ಮಾಡಿ, ಸಾವರ್ಕರ್ ಅವರನ್ನು ಏಕೆ ಎಳೆದು ತರುತ್ತೀರಾ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿ, ಸಾವರ್ಕರ್ ಎಂದರೆ ಸಾಹಿತ್ಯ, ಅವರ ಬಗ್ಗೆ ಹಲವಾರು ಪುಸ್ತಕಗಳಿವೆ. ಸಾವರ್ಕರ್ ಬಗ್ಗೆ ಗೊತ್ತಿಲ್ಲದವರು ಪುಸ್ತಕಗಳನ್ನು ಸ್ವಲ್ಪ ಓದಲಿ ಎಂದು ಹೇಳಿದರು.

ಸಹಸ್ರ ಕಂಠದಲ್ಲಿ ದೇಶಭಕ್ತಿ ಗೀತೆಗಳ ಗಾಯನ
ಸಾವಿರ ಮಹಿಳೆಯರಿಂದ ಗೀತ ಗಾಯನದ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸಹಸ್ರ ಕಂಠದಲ್ಲಿ ಮೂರು ರಾಷ್ಟ್ರಭಕ್ತಿಗೀತೆಗಳ ಗಾಯನ ನಡೆಯಿತು. ಮೊದಲನೆಯದಾಗಿ ಚಂದ್ರಶೇಖರ ಭಂಡಾರಿ ರಚಿತ ಮಾತೆ ಪೂಜಕ ನಾನು ಎನ್ನಯ ಹಾಡು, ಎರಡನೆಯದಾಗಿ ವೀರ ಸಾವರ್ಕರ್ ರಚಿತ ಜಯೋಸ್ತುತೆ ಗಾಯನ, ಮೂರನೆಯದಾಗಿ ಬಂಕಿಮಚಂದ್ರ ಚಟರ್ಜಿ ರಚಿತ ವಂದೇಮಾತರಂ ಹಾಡು ಹಾಡಲಾಯಿತು. ಇದಕ್ಕೆ ಮಕ್ಕಳು, ಯುವಕರು ದನಿಗೂಡಿಸಿದರು.

ಬೃಹತ್‌ ರ‍್ಯಾಲಿ; ಗಮನ ಸೆಳೆದ ಕೇಸರಿ ಧ್ವಜ, ಸಾವರ್ಕರ್‌ ಭಾವಚಿತ್ರಗಳು

1944ರಲ್ಲಿ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ನೆನಪಿಗಾಗಿ ಹಮ್ಮಿಕೊಂಡಿದ್ದ ʼಸಾವರ್ಕರ್ ಸಾಮ್ರಾಜ್ಯʼ ಕಾರ್ಯಕ್ರಮಕ್ಕೂ ಮುನ್ನಾ ನಗರದ ಬಸ್ ನಿಲ್ದಾಣದಿಂದ ಸೈನ್ಸ್ ಮೈದಾನದವರೆಗೆ ಬೃಹತ್‌ ರ‍್ಯಾಲಿ ನಡೆಸಲಾಯಿತು. ನೂರಾರು ಹಿಂದು ಕಾರ್ಯಕರ್ತರು ಆಟೋ, ಕಾರು, ಬೈಕ್‌ಗಳಲ್ಲಿ ಕೇಸರಿ ಧ್ವಜ, ಸಾವರ್ಕರ್‌ ಭಾವಚಿತ್ರಗಳನ್ನಿಡಿದು, ಘೋಷಣೆಗಳನ್ನು ಕೂಗುತ್ತಾ ರ‍್ಯಾಲಿಯನ್ನು ಭಾಗವಹಿಸಿದ್ದರು.

ಶಿವಮೊಗ್ಗದಲ್ಲಿ ಕೊಲೆಯಾಗಿದ್ದ ಹರ್ಷ ಭಾವಚಿತ್ರಗಳು ಅಲ್ಲಲ್ಲಿ ಕಂಡುಬಂದವು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಎ ಸರ್ಕಲ್ ಹಾಗೂ ಸೈನ್ಸ್ ಮೈದಾನದಲ್ಲಿ ಸಾವರ್ಕರ್ ಕಟೌಟ್‌ ಅಳವಡಿಸಲಾಗಿತ್ತು. ನಗರದ ಹಲವೆಡೆ ಸಾವರ್ಕರ್‌ ಅವರ ನೂರಾರು ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಹಾಕಲಾಗಿತ್ತು.

ಇದನ್ನೂ ಓದಿ | ವೀರ ಸಾವರ್ಕರ್ ವಿರಚಿತ ಜಯೋಸ್ತುತೆ ಗೀತೆ ಮರು ಸೃಷ್ಟಿಸಿದ ಶಿವಮೊಗ್ಗದ ಯುವಕರು; ಸಾತ್ಯಕಿ ಸಾವರ್ಕರ್‌ ಹರ್ಷ

Exit mobile version