ಗದಗ: ಉತ್ತರ ಕರ್ನಾಟಕದ ಹಸಿರು ಸಹ್ಯಾದ್ರಿ ಖ್ಯಾತಿಯ ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಉಳಿಸುವಂತೆ (Save Kappattagudda) ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಕೋರಿದ್ದಾರೆ. ಅಪಾರ ಆಯುರ್ವೇದ ಗಿಡಮೂಲಿಕೆ, ಖನಿಜ ಸಂಪತ್ತನ್ನು ಒಳಗೊಂಡಿರುವ ಕಪ್ಪತ್ತಗುಡ್ಡಕ್ಕೆ ಕಂಟಕ ಎದುರಾಗಿದ್ದು, ತಾವು ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
2019ರಿಂದಲೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹೊಂಚು ಹಾಕುತ್ತಾ ಬಂದಿವೆ. ಆದರೆ, ವಿವಿಧ ಮಠಾಧೀಶರು, ಪರಿಸರವಾದಿಗಳ ಹೋರಾಟ ನಡೆಸಿದ ಫಲವಾಗಿ, ಗಣಿಗಾರಿಕೆಗೆ ಕೊಡಲು ಹೊರಟಿದ್ದ ಸರ್ಕಾರ ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಎಂದು ಘೋಷಣೆ ಮಾಡಿದೆ. ಇಷ್ಟಾದರೂ ಕೆಲವು ಮೈನ್ಸ್ ಹಾಗೂ ಕಲ್ಲು ಗಣಿಗಾರಿಕೆಯವರು ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಬೆನ್ನು ಬಿದ್ದಿದ್ದಾರೆ.
ಅರಣ್ಯ ಇಲಾಖೆ ಇವರ ಅರ್ಜಿ ತಿರಸ್ಕರಿಸಿದರೂ, ಹೇಗಾದರೂ ಮಾಡಿ ಹಸಿರು ಸಹ್ಯಾದ್ರಿಯನ್ನು ಕಿತ್ತು ತಿನ್ನಬೇಕೆಂಬ ಒಳಸಂಚು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ವನ್ಯಜೀವಿ ಧಾಮದ ಪ್ರಕಾರ ಹತ್ತು ಕಿ.ಮೀ. ವ್ಯಾಪ್ತಿ ಯಾವುದೇ ಗಣಿಗಾರಿಕೆಗೆ ಅನುಮತಿ ಇಲ್ಲ. ಆದರೆ, ಇದನ್ನು ಒಂದು ಕಿ.ಮೀ. ವ್ಯಾಪ್ತಿಗೆ ಇಳಿಸುವಂತೆ ಭೂಗಳ್ಳರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೆ, ಬಲ್ಡೋಟಾ ಕಂಪನಿ ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದೆ. ಶತಾಯಗತಾಯ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಗಣಿ ಕಂಪನಿಗಳು ಮತ್ತು ಕಲ್ಲು ಗಣಿಗಾರಿಕೆ ಸಂಸ್ಥೆಗಳು ಕಪ್ಪತ್ತಗುಡ್ಡದ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟಿವೆ. ಚಿನ್ನ, ಕಬ್ಬಿಣ ಮತ್ತು ಇತರೆ ಖನಿಜಗಳ ಗಣಿಗಾರಿಕೆಗೆ ಹೊಸ ಪ್ರಸ್ತಾವನೆಗಳನ್ನು ಸಲ್ಲಿಸಿವೆ. ಚುನಾವಣೆಗೆ ಮುನ್ನ ರಾಜ್ಯ ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡಲು ಉತ್ಸುಕವಾಗಿದೆ. ಒಂದು ವೇಳೆ ರಾಜ್ಯ ಸರ್ಕಾರ ಯಾವುದೇ ಗಣಿಗಾರಿಕೆ ಚಟುವಟಿಕೆಯನ್ನು ಅನುಮೋದಿಸಿದರೆ ಇದು ಪರಿಸರ, ವನ್ಯಜೀವಿ ಮತ್ತು ಜೈವಿಕ ವೈವಿಧ್ಯತೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪರೀಕ್ಷಾ ಕೇಂದ್ರಕ್ಕೆ ಹೋಗಲು ದಾರಿ ತಪ್ಪಿ ಅಳುತ್ತ ನಿಂತಿದ್ದ ಬಾಲಕಿಗೆ ಪೊಲೀಸ್ ಅಧಿಕಾರಿ ಸಹಾಯ ಮಾಡಿದ್ದು ಹೇಗೆ?
ನೀರು, ಮಣ್ಣು ಮತ್ತು ಸಸ್ಯ ಸಂಕುಲವನ್ನು ರಕ್ಷಿಸಲು ನಮ್ಮ 20 ವರ್ಷಗಳ ಪ್ರಾಮಾಣಿಕ ಪ್ರಯತ್ನಗಳು ವ್ಯರ್ಥವಾಗುತ್ತವೆ. ಗದಗ ಜಿಲ್ಲೆಯ ಪರಿಸರ ಸೂಕ್ಷ್ಮವಾಗಿರುವ ‘ಕಪ್ಪತಗುಡ್ಡ’ದಲ್ಲಿ ಗಣಿಗಾರಿಕೆಯಿಂದ ಸಸ್ಯವರ್ಗವನ್ನು ರಕ್ಷಿಸಿ ಎಂದು ಶಿವಕುಮಾರ ಸ್ವಾಮೀಜಿ ವಿನಂತಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ