ನವದೆಹಲಿ: ದೇಶದ ಏಳು ರಾಜ್ಯಗಳ ಹೈಕೋರ್ಟ್‌ಗಳಿಗೆ ಏಳು ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ದಿಸೆಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅಲೋಕ್ ಅರಾಧೆ (ಇವರು ಛತ್ತೀಸ್‌ಗಢ ಮೂಲದವರು) ಅವರನ್ನು ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ.
ಬುಧವಾರ ನಡೆದ ಕೊಲಿಜಿಯಂ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಸಜೀವ್ ಖನ್ನಾ ಅವರು ಏಳು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿದ್ದಾರೆ.
ಬಾಂಬೆ, ಗುಜರಾತ್, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಹಾಗೂ ಮಣಪುರ ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಮಾಡಿರುವ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ, ನ್ಯಾಯಮೂರ್ತಿಗಳು ಸಿಜೆ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಗುಜರಾತ್ ಹೈಕೋರ್ಟ್‌ಗೆ ಈ ಬಾರಿ ಮಹಿಳಾ ಜಡ್ಜ್ ಒಬ್ಬರು ಸಿಜೆ ಆಗಲಿದ್ದಾರೆ. ನ್ಯಾ.ಸುನಿತಾ ಅಗರ್ವಾಲ್ ಅವರನ್ನು ಗುಜರಾತ್ ಹೈಕೋರ್ಟ್ ಸಿಜೆಯನ್ನಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ. ಸದ್ಯ, ದೇಶದ ಯಾವುದೇ ಹೈಕೋರ್ಟ್‌ಗೆ ಮಹಿಳಾ ನ್ಯಾಯಮೂರ್ತಿಯು ಮುಖ್ಯ ನ್ಯಾಯಮೂರ್ತಿ ಆಗಿಲ್ಲ. ಸುನಿತಾ ಅಗರ್ವಾಲ್ ನೇಮಕವಾದರೆ ದೇಶದ ಹೈಕೋರ್ಟ್ ಸಿಜೆ ಆಗಿರುವ ಏಕೈಕ ಮಹಿಳಾ ನ್ಯಾಯಮೂರ್ತಿ ಎನಿಸಲಿದ್ದಾರೆ.
ಇದನ್ನೂ ಓದಿ: Supreme Court Collegium: ಜಡ್ಜ್ ಸ್ಥಾನಕ್ಕೆ ವಿಶೇಷಚೇತನ, ಟ್ರಯಲ್ ಕೋರ್ಟ್ ಲಾಯರ್, ಸಣ್ಣ ಜಾತಿಯ ವಕೀಲ! ಕೊಲಿಜಿಯಂ ಶಿಫಾರಸು
ಬಾಂಬೆ ಹೈಕೋರ್ಟ್‌ಗೆ ನ್ಯಾ. ದೇವೇಂದ್ರ ಕುಮಾರ್ ಉಪಾಧ್ಯಾಯ, ಆಂಧ್ರಪ್ರದೇಶ ಹೈಕೋರ್ಟ್‌ಗೆ ನ್ಯಾ.ಧೀರಜ್ ಸಿಂಗ್ ಠಾಕೂರ್, ಮಣಿಪುರ ಹೈಕೋರ್ಟ್‌ಗೆ ನ್ಯಾ.ಸಿದ್ಧಾರ್ಥ್ ಮೃದುಲ್, ಮಣಿಪುರ ಹೈಕೋರ್ಟ್‌ಗೆ ನ್ಯಾ.ಸುಭಾಸಿಸ್ ತಲಪಾತ್ರ ಹಾಗೂ ಕೇರಳ ಹೈಕೋರ್ಟ್‌ಗೆ ನ್ಯಾ.ಆಶಿಶ್ ಜೆ ದೇಸಾಯಿ ಅವರನ್ನು ಸಿಜೆಗಳನ್ನಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ.