Site icon Vistara News

SC ST Reservation : ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕ; ದಲಿತ ಸಮುದಾಯಕ್ಕೆ ದ್ರೋಹ ಎಂದ ದಸಂಸ

Mavalli shankar

#image_title

ಬೆಂಗಳೂರು: ರಾಜ್ಯ ಸರಕಾರ ಪರಿಶಿಷ್ಟ ಜಾತಿಗಳಿಗೆ ನಿಗದಿ ಮಾಡಲಾದ ಶೇ. 17 ಮೀಸಲಾತಿಯಲ್ಲಿ (SC ST Reservation) ವಿವಿಧ ಉಪಜಾತಿಗಳಿಗೆ ಒಳಮೀಸಲು ವರ್ಗೀಕರಣ ಮಾಡಿದ್ದು ಅವೈಜ್ಞಾನಿಕವಾಗಿದೆ. ಇದರಿಂದ ದಲಿತ ಸಮುದಾಯಕ್ಕೆ ದ್ರೋಹ ಎಸಗಿದಂತಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಆಪಾದಿಸಿದೆ.

ನ್ಯಾ. ಸದಾಶಿವ ಆಯೋಗದ ವರದಿ ಹಾಗೂ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಗಳನ್ನು ಕಡೆಗಣಿಸಿರುವ ಸರ್ಕಾರ, ಅವೈಜ್ಞಾನಿಕವಾಗಿ ಒಳಮೀಸಲಾತಿ ವರ್ಗೀಕರಿಸಿ ದಲಿತ ಸಮುದಾಯಕ್ಕೆ ದ್ರೋಹ ಎಸಗಿದೆ. ಪರಿಶಿಷ್ಟ ಜಾತಿಗಳಿಗೆ ಅನ್ಯಾಯ ಎಸಗಿರುವ ರಾಜ್ಯ ಬಿ.ಜೆ.ಪಿ. ಸರ್ಕಾರದ ಧೋರಣೆ ಸರಿಯಲ್ಲ. ಬಿಜೆಪಿಯ ಈ ನಿರ್ಧಾರವನ್ನು ಖಂಡಿಸುವುದಾಗಿ ಅದು ಹೇಳಿದೆ.

ʻʻನ್ಯಾ.ಸದಾಶಿವ ಆಯೋಗ ಹಾಗೂ ನ್ಯಾ.ನಾಗಮೋಹನ್ ದಾಸ್ ಅವರ ಆಯೋಗಗಳು, ಸಾಕಷ್ಟು ಅಧ್ಯಯನಗಳನ್ನು ನಡೆಸಿ, ಪರಿಶಿಷ್ಟ ಜಾತಿಗಳಿಗೆ ವೈಜ್ಞಾನಿಕವಾಗಿ ಮೀಸಲಾತಿ ವರ್ಗೀಕರಣ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ನ್ಯಾ.ನಾಗಮೋಹನ್ ದಾಸ್ ಆಯೋಗದ ಮೀಸಲಾತಿ ಹೆಚ್ಚಳದ ವರದಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರುವ ರಾಜ್ಯ ಸರ್ಕಾರ ನ್ಯಾ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿದೆ. ಒಳ ಮೀಸಲಾತಿ ಜಾರಿಗಾಗಿ ತಾನೇ ಒಂದು ಸಂಪುಟ ಉಪಸಮಿತಿ ರಚಿಸಿ ಯಾವುದೇ ಅಧ್ಯಯನ ಇಲ್ಲದೆ ಅವೈಜ್ಞಾನಿಕವಾಗಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ವರ್ಗೀಕರಿಸಿ ಆದೇಶ ಹೊರಡಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯುವುದರಿಂದ ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಆತುರವಾಗಿ ಹಾಗೂ ಅವೈಜ್ಞಾನಿಕ ನಿರ್ಧಾರ ತೆಗೆದುಕೊಂಡಿದೆʼʼ ಎಂದು ದಸಂಸದ ರಾಜ್ಯ ಪ್ರಧಾನ ಸಂಚಾಲಕರಾಗಿರುವ ಮಾವಳ್ಳಿ ಶಂಕರ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ʻಶೇಕಡ 1ರಷ್ಟು ಮೀಸಲಾತಿ ಅಡಿಯಲ್ಲಿ ಗುರುತಿಸಿರುವ ಗ್ರೂಪ್-4 ರ 89 ಜಾತಿಗಳಲ್ಲಿ ಹೊಲೆಯ ಸಂಬಂಧಿತ ಜಾತಿಗಳನ್ನು ಸೇರಿಸಿರುವುದು ಅವೈಜ್ಞಾನಿಕ, ಗ್ರೂಪ್ -4ರ ಕ್ರಮಸಂಖ್ಯೆ-38ರಲ್ಲಿ ‌ ‘ಹೊಲಯ, ಹೊಲೆರ್, ಹೊಲೆಯ ಮೂರು ಜಾತಿಗಳನ್ನು ಸೇರಿಸಲಾಗಿದೆ. ಆದರೆ ಈ ಮೂರು ಜಾತಿಗಳು ಸಹ ಹೊಲೆಯ ಸಂಬಂಧಿತ ಜಾತಿಗಳಾಗಿದ್ದು, ನ್ಯಾಯಯುತವಾಗಿ ಈ ಜಾತಿಗಳನ್ನು ಗ್ರೂಪ್-2ಕ್ಕೆ ಸೇರಿಸಬೇಕಾಗಿತ್ತುʼʼ ಎನ್ನುವುದು ದಸಂಸದ ವಾದ.

ʻʻಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯ ಸಂಪುಟ ಉಪಸಮಿತಿ ನಡೆಸಿರುವ ಒಳಮೀಸಲಾತಿ ವರ್ಗೀಕರಣ ಪಟ್ಟಿಯ ವಿಂಗಡಣೆಯು ಅವೈಜ್ಞಾನಿಕವಾಗಿದೆ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ ಹಾಗೂ ಅಧ್ಯಯನ ನಡೆಸದೇ ಮೀಸಲಾತಿ ವರ್ಗೀಕರಣ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಸರಿಯಲ್ಲ. ಇದು ಸಂಪೂರ್ಣ ಚುನಾವಣಾ ಕೇಂದ್ರಿತ ನಿರ್ಧಾರವಾಗಿದೆ ಎಂಬುದು ಸ್ಪಷ್ಟವಾಗಿದೆʼʼ ಎಂದು ಮಾವಳ್ಳಿ ಶಂಕರ್‌ ಹೇಳಿದ್ದಾರೆ.

ಶಿಫಾರಸನ್ನು ಹಿಂಪಡೆಯಲು ಒತ್ತಾಯ

ರಾಜ್ಯ ಸರ್ಕಾರ ಕೂಡಲೇ ಈ ಮೀಸಲಾತಿ ವರ್ಗೀಕರಣ ಶಿಫಾರಸನ್ನು ಹಿಂಪಡೆಯಬೇಕು. ಒಳಮೀಸಲಾತಿ ಕುರಿತ ನ್ಯಾ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು, ಮೀಸಲಾತಿ ವರ್ಗಿಕರಣ ಸಂಬಂಧ ಈಗಾಗಲೇ ದೇಶದ ಹಲವು ರಾಜ್ಯಗಳು ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ್ದು ಅವುಗಳನ್ನು ಮೊದಲು ಇತ್ಯರ್ಥಪಡಿಸಬೇಕು. ಅನಂತರ ಈ ದಮನಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಈ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧ ಅಂಬೇಡ್ಕರ್ ವಾದ ರಾಜ್ಯಾದ್ಯಂತ ಹೋರಾಟ ಮಾಡಲು ಚಿಂತನೆ ನಡೆಸಿದೆ ಎಂದು ಕೂಡಾ ಅವರು ತಿಳಿಸಿದ್ದಾರೆ.

ರಾಜ್ಯ ಸರಕಾರದ ಒಳಮೀಸಲಾತಿಯಲ್ಲಿ ಏನಿದೆ?

ರಾಜ್ಯ ಸರ್ಕಾರವು ಇತ್ತೀಚೆಗೆ ಪರಿಷ್ಕೃತ ಮೀಸಲಾತಿ ನೀತಿಯನ್ನು ಪ್ರಕಟಿಸಿದ್ದು, ಅದರಲ್ಲಿ ಪರಿಶಿಷ್ಟ ಜಾತಿಗೆಂದು ನಿಗದಿಯಾದ ಶೇ. 17 ಮೀಸಲಾತಿಯಲ್ಲಿ ಒಳಮೀಸಲನ್ನು ಕಲ್ಪಿಸಿದೆ. ಇದರ ಪ್ರಕಾರ,

ಗ್ರೂಪ್‌ 1- 6%: ಇದರಡಿ ಬರುವ ಜಾತಿಗಳು: ಆದಿದ್ರಾವಿಡ, ಭಾಂಬಿ, ಮಾದಿಗ, ಸಮಗಾರ
ಗ್ರೂಪ್‌ 2- 5.5%: ಇದರಡಿ ಬರುವ ಜಾತಿಗಳು; ಆದಿ ಕರ್ನಾಟಕ, ಚಲವಾದಿ, ಚನ್ನದಾಸರ, ಹೊಲೆಯ, ಮಹಾರ್‌
ಗ್ರೂಪ್‌ 3- 4.5%: ಬಂಜಾರ ಮತ್ತು ಅವುಗಳಿಗೆ ಸಮನಾದ ಜಾತಿಗಳು, ಭೋವಿ ಮತ್ತು ಸಮನಾದ ಜಾತಿಗಳು, ಕೊರಚ, ಕೊರಮ ಮತ್ತು ಇತರ ನಾಲ್ಕು ಜಾತಿಗಳು
ಗ್ರೂಪ್‌ 4- 1%: ಮೇಲಿನ ಮೂರೂ ಗುಂಪುಗಳಲ್ಲಿ ಬಾರದಿರುವ ಜಾತಿಗಳು, ಅಸ್ಪೃಶ್ಯರು ಮತ್ತು ಇತರ 89 ಜಾತಿಗಳು

ಇದನ್ನೂ ಓದಿ : SC ST Reservation: ಮುಂದುವರಿದ ಬಂಜಾರರ ಆಕ್ರೋಶ; ಗದಗದಲ್ಲಿ ಕೇಶ ಮುಂಡನ ಮಾಡಿಸಿ ಆಕ್ರೋಶ, ಶಿವಮೊಗ್ಗದಲ್ಲಿ ಹೆದ್ದಾರಿ ತಡೆ

Exit mobile version