ಬೆಂಗಳೂರು: ಯಲಹಂಕದಲ್ಲಿರುವ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯೂಎಫ್ ತನ್ನ ಶಾಲಾ ವಾರ್ಷಿಕ (School Day) ದಿನವನ್ನು ಬುಧವಾರ (ಏ. 26) ಆಚರಿಸಿಕೊಂಡಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಏಕತೆ ಮತ್ತು ಸಮಗ್ರತೆಯನ್ನು ಬಿಂಬಿಸುವ ವಿವಿಧ ಭಾಷೆಯ ಹಾಡುಗಳು ಮತ್ತು ಜಾನಪದ, ಶಾಸ್ತ್ರೀಯ, ಯೋಗ ನೃತ್ಯಗಳು ರಿಮಿಕ್ಸ್ ನೃತ್ಯ ಸೇರಿ ಹತ್ತಕ್ಕೂ ಹೆಚ್ಚು ವಿಭಿನ್ನ ಪ್ರಭೇದಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಳಿಕ ಪ್ರಾಂಶುಪಾಲೆ ಡಾ. ಪುಷ್ಪರಾಣಿಯಾದವ್, ಶಾಲೆಯ ವಾರ್ಷಿಕ ದಿನದ ವರದಿಯನ್ನು ಮಂಡಿಸಿದರು. ಜತೆಗೆ ಮುಖ್ಯ ಅತಿಥಿಗಳಿಂದ 2022-23 ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ತರಗತಿಗಳಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 10ನೇ ಮತ್ತು 12ನೇ ತರಗತಿಯ ಬೋರ್ಡ್ ಟಾಪರ್ಸ್‌ಗಳಿಗೆ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾ ಮತ್ತು ಕ್ರೀಡಾ ಸಾಧಕರುಗಳಿಗೆ ಬಹುಮಾನವನ್ನು ನೀಡಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡಿದ ಎ.ಕೆ ಅಗರ್ವಾಲ್, ವಾರ್ಷಿಕ ದಿನದ ಚಟುವಟಿಕೆಗಳಿಗೆ ಭಾಗಿಯಾಗಿದ್ದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯುತ್ತಮ ಸಾಧನೆ ತೋರಿಸಬೇಕು ಎಂದು ಅವರು ಕರೆ ನೀಡಿದರು.
ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಸಂಪೂರ್ಣ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಶಾಲೆಯ ಲಭ್ಯವಿರುವ ಗರಿಷ್ಠ ಸಂಪನ್ಮೂಲವನ್ನು ಬಳಸಿಕೊಳ್ಳುವಂತೆ, ವಿನಂತಿಸಿದರು. ಶಾಲೆ ಎಲ್ಲಾ ಚಟುವಟಿಕೆಗಳಲ್ಲಿ ವಿಶೇಷವಾಗಿ ಇಂದಿನ ವಾರ್ಷಿಕ ದಿನಾಚರಣೆಯಲ್ಲಿ ಎಲ್ಲಾ ಶಿಕ್ಷಕರ ಪ್ರಾಮಾಣಿಕ ಮತ್ತು ಸಮರ್ಪಣಾ ಪರಿಶ್ರಮವನ್ನು ಶ್ಲಾಘಿಸಿದರು.
ಇದನ್ನೂ ಓದಿ: Weather Report: ರಾಯಚೂರಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಅಬ್ಬರ; ಕೊಚ್ಚಿ ಹೋಯ್ತು ಸಾವಿರಾರು ಕ್ವಿಂಟಲ್ ಭತ್ತ
ವಿದ್ಯಾಲಯದ ಪ್ರಾಂಶುಪಾಲೆ ಡಾ. ಪುಷ್ಪರಾಣಿ ಯಾದವ್ ಅವರೊಂದಿಗೆ ಮುಖ್ಯ ಅತಿಥಿಗಳಾಗಿ ಜಿಎಂ ಎ.ಕೆ ಅಗರ್ವಾಲ್ ಹಾಗೂ ಪ್ರೆಸಿಡೆಂಟ್ ಉಮಾ ಅಗರ್ವಾಲ್ ಆಗಮಿಸಿದ್ದರು. ಮುಖ್ಯ ಅತಿಥಿಗಳಿಗೆ ವಿದ್ಯಾರ್ಥಿಗಳು ಸ್ವಾಗತ ನೃತ್ಯ ಪ್ರದರ್ಶಿಸಿ, ಶಾಲೆಯ ವರ್ಣ ರಂಜಿತ ಬ್ಯಾಂಕ್ ತಂಡದಿಂದ ಗೌರವ ವಂದನೆ ನೀಡಲಾಯಿತು.