Site icon Vistara News

School Donation: ಕಾಮಾಕ್ಷಿಪುರ ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ ಸೂಟ್‌ ವಿತರಣೆ; ಶಕುಂತಲಾ ಕುಟುಂಬದಿಂದ ನೆರವು

ಟ್ರ್ಯಾಕ್‌ ಸೂಟ್‌

ಬೆಂಗಳೂರು: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಹೆಸರಘಟ್ಟ ಹೋಬಳಿಯ ಕಾಮಾಕ್ಷಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶಕುಂತಲಾ ಅವರ ಕುಟುಂಬದಿಂದ ಗುರುವಾರ ಟ್ರ್ಯಾಕ್‌ ಸೂಟ್‌ ಅನ್ನು ಕೊಡುಗೆಯಾಗಿ (School Donation) ನೀಡಲಾಯಿತು.

ಶಕುಂತಲಾ ಅವರ ಪುತ್ರರಾದ ಭಾರತ ಸರ್ಕಾರದ ಜಂಟಿ ಆಯುಕ್ತ ಹಾಗೂ ಕೇಂದ್ರ ಕುಕ್ಕುಟ ಅಭಿವೃದ್ಧಿ ಸಂಸ್ಥೆ ಮತ್ತು ತರಬೇತಿ ಸಂಸ್ಥೆ ನಿರ್ದೇಶಕರಾದ ಡಾ.‌ಪಿ.ಎಸ್.ಮಹೇಶ್‌ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಈ ಕೊಡುಗೆಯನ್ನು ನೀಡಿದ್ದು, ಮಕ್ಕಳಿಗೆ ಕ್ರೀಡಾ ಸ್ಫೂರ್ತಿಯನ್ನು ತುಂಬುವ ಕೆಲಸವನ್ನು ಮಾಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಪ್ರತಿ ವರ್ಷ ಗಣರಾಜ್ಯೋತ್ಸವ ದಿನದಂದು ಶಾಲೆಯ ವಿದ್ಯಾರ್ಥಿಗಳಿಗೆ ಈ ಕುಟುಂಬದವರು ಕೊಡುಗೆ ನೀಡುತ್ತಾ ಬಂದಿದ್ದಾರೆ. ಡಾ.‌ ಪಿ.ಎಸ್.ಮಹೇಶ್‌ ಹಾಗೂ ಡಾ.ಪಿ.ಎಸ್.ಹರ್ಷ ಅವರು ತಮ್ಮ ತಾಯಿ ಶಕುಂತಲಾ ಅವರ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ, ಸಮವಸ್ತ್ರ ಸೇರಿದಂತೆ ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸುತ್ತಾ ಬಂದಿದ್ದಾರೆ. ಈ ಮೂಲಕ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸುತ್ತಿದ್ದಾರೆ.

ಸರ್ಕಾರಿ ಶಾಲೆಗೆ ಸರ್ಕಾರದ ಅನುದಾನಗಳನ್ನು ಹೊರತುಪಡಿಸಿ ಸಾರ್ವಜನಿಕರ ಸಹಕಾರವಿದ್ದರೆ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು. ಅಲ್ಲದೆ, ಮೂಲ ಸೌಕರ್ಯಗಳು ಸಮರ್ಪಕವಾಗಿದ್ದರೆ ಗುಣಮಟ್ಟದ ಶಿಕ್ಷಣ ಅಲ್ಲಿನ ವಿದ್ಯಾರ್ಥಿಗಳಿಗೂ ದೊರೆಯುತ್ತದೆ. ಇದಕ್ಕಾಗಿ ಉಳ್ಳವರು ಸಹಾಯ ಮತ್ತು ಸಹಕಾರ ನೀಡಬೇಕು. ಪಾಠದ ಜತೆ ಜತೆಗೆ ಕ್ರೀಡಾ ಚಟುವಟಿಕೆಗೂ ಉತ್ತೇಜನ ನೀಡಬೇಕು ಎಂಬ ದೃಷ್ಟಿಯಿಂದ ಈ ಬಾರಿ 70 ಮಕ್ಕಳಿಗೆ ಟ್ರ್ಯಾಕ್‌ ಸೂಟ್‌ ವಿತರಿಸಿದ್ದಾರೆ.

ಡಾ.‌ ಪಿ.ಎಸ್.ಮಹೇಶ್‌ ಹಾಗೂ ಡಾ.ಪಿ.ಎಸ್.ಹರ್ಷ ಅವರು ಸಾರ್ವಜನಿಕ ಸೇವೆ ಸಲ್ಲಿಸುವ ಜತೆಗೆ ಬಿಡುವಿನ ವೇಳೆಯಲ್ಲಿ ಶಾಲೆಗೆ ಆಗಮಿಸಿ ಮಕ್ಕಳ ಜತೆ ಸಂವಾದವನ್ನೂ ನಡೆಸುತ್ತಿದ್ದು, ಮಕ್ಕಳಿಗೆ ಪ್ರೇರಕ ಭಾಷಣ ಮಾಡಿ ಹುರಿದುಂಬಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ | Republic day 2023 : ಚುನಾವಣಾ ವರ್ಷದಲ್ಲಿ ಸರ್ಕಾರ, ರಾಜ್ಯದ ಸಾಧನೆ ತೆರೆದಿಟ್ಟ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌

Exit mobile version