ಧಾರವಾಡ: ರಾಜ್ಯದ ಹಲವು ಕಡೆ ಭರ್ಜರಿ ಮಳೆಯಾಗುತ್ತಿದೆ. ಧಾರವಾಡದಲ್ಲಿಯೂ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಈಗ ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಆತಂಕ ಶುರುವಾಗಿದೆ. ಜತೆಗೆ ರಾಜ್ಯದಲ್ಲಿ ಶಾಲಾ ಕಟ್ಟಡದ (School Building) ಸಮಸ್ಯೆಗಳು ಆಗಾಗ ಕೇಳಿ ಬರುತ್ತಲೇ ಇವೆ. ಹಲವು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ (Buildings in a dilapidated condition) ಇದ್ದು, ಮಕ್ಕಳು ಹಾಗೂ ಶಿಕ್ಷಕರು (Students and Teachers) ಜೀವ ಕೈಯಲ್ಲಿ ಹಿಡಿದು ಶಾಲೆ ಒಳಗೆ ಪ್ರವೇಶ ಮಾಡಬೇಕಿದೆ. ಇಂಥ ಪರಿಸ್ಥಿತಿಯಲ್ಲಿಯೂ ಶಿಕ್ಷಣ ಇಲಾಖೆ ಶಿಥಿಲಾವಸ್ಥೆ ತಲುಪಿದ ಕಟ್ಟಡಗಳ ಬಗ್ಗೆ ಗಮನಹರಿಸದೇ ಇರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ತಾಲೂಕಿನ ಬೋಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government Higher Primary School) ಚಾವಣಿ ಕುಸಿದು ನಾಲ್ವರು ಮಕ್ಕಳಿಗೆ ಗಾಯಗಳಾಗಿವೆ. ಹೀಗಾಗಿ ಶಿಕ್ಷಣ (education news) ಸಚಿವರೇ ಇತ್ತ ನೋಡಿ ಎಂದು ಇಲ್ಲಿನ ಪೋಷಕರು ಆಗ್ರಹಿಸಿದ್ದಾರೆ.
ಮಂಗಳವಾರದಿಂದ ಸತತ ಮಳೆಯಾಗುತ್ತಿದ್ದು, ಮೊದಲೇ ಶಿಥಿಲಾವಸ್ಥೆ ತಲುಪಿದ್ದ ಬೋಗೂರು ಗ್ರಾಮದ ಸರ್ಕಾರಿ ಶಾಲೆಯ 8ನೇ ತರಗತಿ ಕೊಠಡಿಯ ಚಾವಣಿ ಕುಸಿದಿದೆ. ಈ ವೇಳೆ ಪಾಠ ಕೇಳುತ್ತಿದ್ದ ಮಕ್ಕಳ ಮೇಲೆ ಅದು ಬಿದ್ದಿದೆ. ಚಾವಣಿ ಕೆಳಗೆ ಇದ್ದ ನಾಲ್ಕು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಕೂಡಲೇ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (Garaga Primary Health Centre) ರವಾನೆ ಮಾಡಲಾಗಿದೆ. ಹಳೆಯ ಕಟ್ಟಡವಾಗಿದ್ದರಿಂದ ಚಾವಣಿ ಸಹ ದುಃಸ್ಥಿತಿಯಲ್ಲಿದೆ. ಆದರೆ, ಇದರ ದುರಸ್ತಿಗೆ ಮಾತ್ರ ಇನ್ನೂ ಕ್ರಮ ಕೈಗೊಳ್ಳದಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Weather Report : ಇಂದು 9 ಜಿಲ್ಲೆಗಳಲ್ಲಿ ಭರ್ಜರಿ ಮಳೆ; ಬೆಂಗಳೂರಲ್ಲಿ ಕಣ್ಣಾಮುಚ್ಚಾಲೆ
ಬೀಳುವ ಹಂತದಲ್ಲಿ ಮೂರು ಕೊಠಡಿಗಳು
ಇನ್ನು ಇದೇ ಶಾಲೆಯಲ್ಲಿ ಮೂರು ಕೊಠಡಿಗಳು ಬೀಳುವ ಹಂತದಲ್ಲಿವೆ. ಇಷ್ಟಾದರೂ ಶಿಕ್ಷಣ ಇಲಾಖೆಯಾಗಲಿ, ಶಿಕ್ಷಣ ಸಚಿವರಾಗಲಿ ಇದರ ಬಗ್ಗೆ ಗಮನಹರಿಸುತ್ತಿಲ್ಲ. ಮಕ್ಕಳ ಜೀವ ಬಹಳ ಮುಖ್ಯವಾಗುತ್ತದೆ. ಮಳೆಗೆ ಕಟ್ಟಡಗಳು ಬಿದ್ದರೆ ಯಾರು ಗತಿ? ಮುಂದಾಗುವ ಅವಘಡಕ್ಕೆ ಯಾರು ಹೊಣೆ? ಒಂದು ವೇಳೆ ಜೀವ ಹೋದರೆ ಸರ್ಕಾರದವರಿಗೆ ತಂದು ಕೊಡಲು ಆಗುತ್ತದೆಯೇ? ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶವನ್ನು ಹೊರಹಾಕಿದ್ದಾರೆ. ಹೀಗಾಗಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ (Education Minister Madhu Bangarappa) ಅವರು ಶಿಥಿಲ ಶಾಲೆಗಳತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.