ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳ ದುಃಸ್ಥಿತಿ ಇನ್ನೂ ಮುಂದುವರಿದಿದೆ. ಮಳೆಗಾಲ ಬಂತೆಂದರೆ ಸಾಕು, ಜೋರು ಮಳೆ – ಗಾಳಿ ಬೀಸಿದರೂ ಸಾಕು ಶಾಲೆಗಳು ಹಾನಿಗೊಳಗಾಗುತ್ತವೆ. ಇದನ್ನು ಎಷ್ಟೇ ಸರ್ಕಾರ ಬಂದರೂ ಸರಿಪಡಿಸಲು ಮಾತ್ರ ಆಗುತ್ತಿಲ್ಲ. ಪ್ರತಿ ಬಾರಿಯೂ ಶಿಕ್ಷಣ ಇಲಾಖೆ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಪಾಠ ಮಾಡಬೇಡಿ, ಹಾಗೆ ಮಾಡಿ ಹಾನಿಯಾದರೆ ಆಯಾ ಶಾಲೆಗಳ ಮುಖ್ಯಸ್ಥರೇ ಹೊಣೆ ಎಂದು ಆದೇಶವನ್ನು ಹೊರಡಿಸಿ ಕೈತೊಳೆದುಕೊಂಡು ಬಿಡುತ್ತವೆ. ಇಷ್ಟು ಮಾಡಲು ಆಗುವ ಶಿಕ್ಷಣ ಇಲಾಖೆಗೆ ಅವುಗಳ ದುರಸ್ತಿ ಮಾಡಬೇಕೆಂಬುದು ಮಾತ್ರ ಏಕೆ ಅರ್ಥವಾಗುತ್ತಿಲ್ಲ ಎಂಬ ಆಕ್ರೋಶದ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಲೇ ಇದೆ. ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಚಾವಣಿಯ (School Rooftop) ಕಾಂಕ್ರಿಟ್‌ನ ಸ್ವಲ್ಪ ಭಾಗ ಕುಸಿದು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯಗಳಾಗಿವೆ.
ಇದನ್ನೂ ಓದಿ: Hydropower Project: ಚೀನಾ ಗಡಿಯಲ್ಲಿ ಭಾರೀ ವೆಚ್ಚದ ಮೆಗಾ ಹೈಡ್ರೋಪವರ್ ಪ್ರಾಜೆಕ್ಟ್! 213 ಶತಕೋಟಿ ರೂ. ವೆಚ್ಚ
ಚೇಳೂರು ತಾಲೂಕಿನ ಶಿವಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಶಿಕ್ಷಕರು ಪಾಠ ಮಾಡುತ್ತಿದ್ದರು. ಅದರಂತೆ ಮಕ್ಕಳೂ ಆಸಕ್ತಿಯಿಂದ ಕೇಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಚಾವಣಿಯ ಕಾಂಕ್ರಿಟ್ ಕುಸಿದು ಇಬ್ಬರು ವಿದ್ಯಾರ್ಥಿನಿಯರ ತಲೆ ಮೇಲೆ ಬಿದ್ದಿದೆ. ಹೀಗಾಗಿ ಅವರ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಬಂದಿದೆ.
ದೊಡ್ಡವಾರಪಲ್ಲಿ ನಂದಿತಾ ಹಾಗೂ ಗ್ಯಾದಿವಾಂಡ್ಲಪಲ್ಲಿಯ ಅಕ್ಷಯ ಎಂಬ ಮಕ್ಕಳ ತಲೆಗೆ ಗಾಯಗಳಾಗಿವೆ. ಇವರು 3ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ಗಾಯಾಳು ವಿದ್ಯಾರ್ಥಿಗಳಿಗೆ ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಶಿವಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೂ ವೈದ್ಯರಿಲ್ಲದೆ ಇದ್ದಿದ್ದರಿಂದ ಈ ಮಕ್ಕಳಿಗೆ ತುರ್ತು ಚಿಕಿತ್ಸೆ ಸಿಗಲಿಲ್ಲ. ಕೊನೆಗೆ 10 ಕಿಲೋ ಮೀಟರ್ ದೂರದ ಪಾತಪಾಳ್ಯ ಆಸ್ಪತ್ರೆಗೆ ಕರೆದೊಯ್ದು ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ.