Site icon Vistara News

Hampi Utsav: ಹಂಪಿ ಉತ್ಸವ ಹಿನ್ನೆಲೆ ಹೊಸಪೇಟೆ ತಾಲೂಕಿನ ಶಾಲೆಗಳಿಗೆ ಇಂದು ರಜೆ

Hampi Utsav 10

ವಿಜಯನಗರ: ಹಂಪಿ ಉತ್ಸವ ಹಿನ್ನೆಲೆಯಲ್ಲಿ ಫೆಬ್ರವರಿ 3 ರಂದು ಶನಿವಾರ ಹೊಸಪೇಟೆ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ವಿಜಯನಗರ ಶಾಲಾ ಇಲಾಖೆ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿ ದಿವಾಕರ್ ಮೌಖಿಕ ಆದೇಶ ಮೇರೆಗೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಂಪಿ ಉತ್ಸವದಲ್ಲಿ ಭಾಗವಹಿಸಲಿ ಎಂಬ ಉದ್ದೇಶದಿಂದ ಶಾಲೆಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.

ಹಂಪಿ ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಹೊಸಪೇಟೆ: ವಿಜಯನಗರ ಸಾಮಾಜ್ಯದ ಗತವೈಭವ ಸಾರುವ ʼಹಂಪಿ ಉತ್ಸವʼಕ್ಕೆ (Hampi Utsav 2024) ಶುಕ್ರವಾರ ಸಂಜೆ ಸಿಎಂ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಮೂರು ದಿನಗಳ ಉತ್ಸವದಲ್ಲಿ ಏಕಕಾಲದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಂಪಿ ಉತ್ಸವ ವೀಕ್ಷಣೆಗಾಗಿ ವಿವಿಧೆಡೆಯಿಂದ ಸಾವಿರಾರು ಜನರು ಆಗಮಿಸಿದ್ದರು.

ಇದೇ ವೇಳೆ ಹಂಪಿಯ ಆನೆಲಾಯದ ಬಳಿ ಏರ್ಪಡಿಸಿರುವ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗೆ ವೇದಿಕೆಯಲ್ಲಿ ಸಿಎಂ ಚಾಲನೆ ನೀಡಿದರು. ವಿಜಯನಗರ ಸಾಮ್ರಾಜ್ಯದ ವೈಭವ ಬಿಂಬಿಸುವ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ಫೆ. 8 ರವರೆಗೆ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌, ಸಚಿವ ಬಿ. ನಾಗೇಂದ್ರ, ಪದ್ಮಶ್ರೀ ಮಂಜಮ್ಮ ಜೋಗತಿ, ಹೊಸಪೇಟೆ ಶಾಸಕ ಗವಿಯಪ್ಪ, ಬಳ್ಳಾರಿ ಶಾಸಕ ನಾರಾ ಭರತ್‌ ರೆಡ್ಡಿ, ಕಂಪ್ಲಿ ಶಾಸಕ ಗಣೇಶ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರಾದ ನೇಮಿರಾಜ ನಾಯ್ಕ, ಕೆ. ರಾಘವೇಂದ್ರ ಹಿಟ್ನಾಳ್, ಎನ್.ಟಿ. ಶ್ರೀನಿವಾಸ, ಕೃಷ್ಣಾ ನಾಯಕ್, ಎಂ.ಪಿ. ಲತಾ ಮಲ್ಲಿಕಾರ್ಜುನ್, ಪಿ. ದೇವೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | Hampi Utsav 2024: ವಿಜಯನಗರ ಸಾಮ್ರಾಜ್ಯದ ವೈಭವ ರಾಜ್ಯದಲ್ಲಿ ಪುನಃ ಮರುಕಳಿಸಬೇಕು: ಸಿಎಂ ಸಿದ್ದರಾಮಯ್ಯ

ಮೂರು ದಿನಗಳ (ಫೆಬ್ರವರಿ 2, 3 ಮತ್ತು 4 ರಂದು) ಹಂಪಿ ಉತ್ಸವದ ಭಾಗವಾಗಿ ಗ್ರಾಮೀಣ ಕ್ರೀಡೆಗಳು, ರಂಗೋಲಿ ಸ್ಪರ್ಧೆಗಳು, ಸಂಗೀತ, ಸಾಹಸ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಏಕಕಾಲದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಾಲ್ಕು ದೊಡ್ಡ ವೇದಿಕೆಗಳನ್ನು ರಚಿಸಲಾಗಿದೆ. ಹಂಪಿ ಉತ್ಸವದಲ್ಲಿ ನಡೆಯುವ ಗಾಯನ, ಸಂಗೀತ, ನೃತ್ಯ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಗಾಯಕರು, ಸಂಗೀತಗಾರರು ಸೇರಿ ವಿವಿಧ ಕಲಾವಿದರು ಭಾಗವಹಿಸಲಿದ್ದಾರೆ. ಪ್ರತಿಭೆ ಪ್ರದರ್ಶಿಸಲು ವಿವಿಧ ಸಾಂಸ್ಕೃತಿಕ ತಂಡಗಳನ್ನು ನಿಯೋಜಿಸಲಾಗಿದೆ. ಹೊಸಪೇಟೆಯ ರಸ್ತೆಗಳಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.

ಹೆಲಿ ರೈಡ್ ವ್ಯವಸ್ಥೆ

ವಿಜಯನಗರ ಸಾಮ್ರಾಜ್ಯದ ಕುರುಹುಗಳನ್ನು ಆಕಾಶದಿಂದ ನೋಡಿ ಆನಂದಿಸಲು ಇಚ್ಛಿಸುವ ಪ್ರವಾಸಿಗರಿಗೆ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪ್ರಯಾಣಿಕರಿಗೆ 4,229 ರೂ. ಟಿಕೆಟ್ ನಿಗದಿಪಡಿಸಲಾಗಿದೆ. ಹೆಲಿಕಾಪ್ಟ‌ರ್ ರೈಡ್‌ಗೆ ಪ್ರತಿ ಬಾರಿ ಐದರಿಂದ ಆರು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇನ್ನು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯು ಹೊಸಪೇಟೆಯಿಂದ ಸಮೀಪದ ಹಳ್ಳಿಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ವಿಶೇಷ ಬಸ್‌ ಸೇವೆ ಪ್ರಾರಂಭಿಸಿದೆ.

Exit mobile version