Site icon Vistara News

ಪ್ರಮೋದ್ ಮುತಾಲಿಕ್ ತುಲಾಭಾರಕ್ಕೆ ಅನುಮತಿ ನೀಡದಂತೆ SDPI ಪಟ್ಟು!

ವಿಜಯನಗರ: ಹಗರಿಬೊಮ್ಮನಹಳ್ಳಿ ಶ್ರೀರಾಮ ಸೇನೆ ತಾಲೂಕು ಘಟಕದ ವತಿಯಿಂದ ಜುಲೈ 13ರ ಗುರುಪೂರ್ಣಿಮೆಯ ದಿನ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ಹಮ್ಮಿಕೊಂಡಿರುವ ತುಲಾಭಾರ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡಬಾರದು ಎಂದು ಎಸ್‌ಡಿಪಿಐ (SDPI) ಆಗ್ರಹಿಸಿದೆ.

ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುತಾಲಿಕ್ ತುಲಾಭಾರ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಅವರಿಗೆ ಎಸ್‌ಡಿಪಿಐ ಮನವಿ ಮಾಡಿದೆ.

ಜುಲೈ ೧೩ರಂದು ಹಗರಿಬೊಮ್ಮನಹಳ್ಳಿಯ ಕೂಡ್ಲಿಗಿ ವೃತ್ತದ ಬಳಿ ತುಲಾಭಾರ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದು, ಅದೇ ದಿನ ಸಂಜೆ 5 ಗಂಟೆಗೆ ಪ್ರಮೋದ್ ಮುತಾಲಿಕ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇಲ್ಲಿ ಮುತಾಲಿಕ್ ಮಾತನಾಡಿದರೆ, ಕೋಮು ಪ್ರಚೋದನೆಗೆ ಸಂಬಂಧಪಟ್ಟಂತೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ಕಾರ್ಯಕ್ರಮವನ್ನು ನಡೆಸದಂತೆ ತಡೆಹಿಡಿಯಬೇಕು ಎಂದು ಎಸ್‌ಡಿಪಿಐ ಮುಖಂಡರು ಎಸ್ಪಿಗೆ ಮನವಿ ಮಾಡಿದ್ದಾರೆ.

ಈಗಾಗಲೇ ರಾಜ್ಯದ ಹಲವು ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಮುತಾಲಿಕ್ ಪ್ರವೇಶ, ಭಾಷಣ ಎರಡನ್ನೂ ನಿರ್ಬಂಧಿಸಲಾಗಿದೆ. ವಿಜಯನಗರ ರಾಜ್ಯದಲ್ಲೇ ಶಾಂತಿ, ಸೌಹಾರ್ದತೆಗಾಗಿ ಹೆಸರುವಾಸಿ ಆಗಿರುವ ಜಿಲ್ಲೆ. ಹೀಗಾಗಿ ಯಾವುದೇ ತರಹದ ಕೋಮು ಗಲಭೆಗಳು ಇಲ್ಲಿ ನಡೆಯಬಾರದು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ| ನೂಪುರ್, ಚಕ್ರತೀರ್ಥ, ಕಾಶ್ಮೀರ ಹಿಂದೂಗಳಿಗೆ ನಮ್ಮ ಬೆಂಬಲ: ಪ್ರಮೋದ್‌ ಮುತಾಲಿಕ್

Exit mobile version