Site icon Vistara News

Heeraben Modi | ಪ್ರಧಾನಿ ಮೋದಿ ಮಾತೃ ವಿಯೋಗಕ್ಕೆ ಸಾಧು ಸಂತರ ಸಂತಾಪ

heeraben

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ (Heeraben Modi) ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಶುಕ್ರವಾರ (ಡಿ.೩೦) ನಿಧನರಾಗಿದ್ದು, ರಾಜ್ಯದ ವಿವಿಧೆಡೆ ಸ್ವಾಮೀಜಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀ ಸುಗುಣೇಂದ್ರ ಸ್ವಾಮೀಜಿ, ಉಡುಪಿ ಪುತ್ತಿಗೆ ಮಠ
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹರಿ ಪಾದ ಸೇರಿರುವ ವಿಚಾರ ತಿಳಿದು ಬೇಸರವಾಯಿತು. ದೇಶಕ್ಕೆ ನಾಯಕ, ವಿಶ್ವಕ್ಕೆ ಉತ್ತಮ ಮಾದರಿ ವ್ಯಕ್ತಿಯಾಗಿರುವ ನರೇಂದ್ರ ಮೋದಿಯವರನ್ನು ನೀಡಿದ ಆ ತಾಯಿ ಪುಣ್ಯಾತ್ಮರು. ಮೋದಿಯಂತಹ ಸುಪುತ್ರನನ್ನು ದೇಶಕ್ಕೆ ನೀಡಿರುವ ಹಿನ್ನೆಲೆಯಲ್ಲಿ ಅವರು ದೇಶದ ಆಸ್ತಿಯಾಗಿದ್ದಾರೆ. ಮೋದಿಯವರಿಗೆ ಬೆನ್ನೆಲುಬಾಗಿ ಪೂರ್ಣ ಬಲವನ್ನು ನೀಡಿದ ಆ ಮಾತೆ ಅಸ್ತಂಗತರಾಗಿರುವುದು ದುಃಖ ತಂದಿದೆ. ಈ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀಕೃಷ್ಣ ನೀಡಲಿ, ಇನ್ನಷ್ಟು ಉತ್ತಮ ಕಾರ್ಯಕ್ಕೆ ಆ ತಾಯಿಯ ಆಶೀರ್ವಾದ ಸದಾ ಕಾಲ ಇರಲಿ ಎಂದು ಆಸ್ಟ್ರೇಲಿಯಾ ಬ್ರಿಸ್ಬೇನ್‌ನಿಂದ ಪುತ್ತಿಗೆ ಶ್ರೀಗಳು ಸಂತಾಪ ಸೂಚಿಸಿದ್ದಾರೆ.

ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಉಡುಪಿ ಪೇಜಾವರ ಮಠ
ಪ್ರಧಾನಿ ನರೇಂದ್ರ ಮೋದಿಯವರ ಮಾತೃಶ್ರೀ ನಿಧನ ಸುದ್ದಿ ತಿಳಿದು ತೀವ್ರ ವಿಷಾದವಾಗಿದೆ. ಹೀರಾಬೆನ್ ಅವರು ಭಾರತದ ಗೌರವವನ್ನು ಜಾಗತಿಕವಾಗಿ ಇಮ್ಮಡಿಸುವ ಓರ್ವ ಸಮರ್ಥ ನಾಯಕನಿಗೆ ಜನ್ಮವಿತ್ತ ಪುಣ್ಯಗರ್ಭ. ಅಂಥ ಸಾರ್ಥಕ ಬದುಕು ನಡೆಸಿದ ಹೀರಾಬೆನ್ ಅವರ ಆತ್ಮಕ್ಕೆ ಸಮ್ಮತಿಯನ್ನು ಮತ್ತು ಮಾತೃ ವಿಯೋಗದ ದುಃಖ ಸಹಿಸುವ ಶಕ್ತಿಯನ್ನು ಸಹಿಸುವ ಶಕ್ತಿಯನ್ನು ಮೋದಿಯವರು ಮತ್ತು ಅವರ ಒಡಹುಟ್ಟಿದವರಿಗೆ ಕರುಣಿಸುವಂತೆ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತೇವೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.

ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ಭವ್ಯ ಭಾರತಕ್ಕೆ ಸಮರ್ಥ ಪ್ರಧಾನಿಯನ್ನು ನೀಡಿದಂತಹ ಹೀರಾ ಬೆನ್ ಅವರ ನಿಧನದಿಂದ ಭಾರತ ಹಿರಿಯ ಚೇತನವೊಂದನ್ನು ಕಳೆದುಕೊಂಡಂತಾಗಿದೆ. ಭಾರತವನ್ನು ಮುನ್ನಡೆಸುವ ಸಮರ್ಥ ಪ್ರಧಾನಿಯನ್ನು ನಮ್ಮೆಲ್ಲರಿಗೂ ಕೊಡುಗೆಯಾಗಿ ನೀಡಿದ ಆ ತಾಯಿ ತಮ್ಮ ಮಕ್ಕಳಿಗೆ ನೀಡಿರುವ ಸಂಸ್ಕಾರ ಆದರ್ಶನೀಯ. ಹೀರಾಬೆನ್ ಅವರ ನಿಧನದಿಂದ ದುಃಖಿತರಾಗಿರುವ ಕುಟುಂಬ ವರ್ಗ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ, ಅವರ ಬಂಧು ವರ್ಗದವರಿಗೆ ಭಗವಂತನು ದುಃಖವನ್ನು ಸಹಿಸುವ ಶಕ್ತಿಯನ್ನು, ಮಾತೆ ಹೀರಾಬೆನ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಆಶಿಸುತ್ತೇವೆ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ | Heeraben Modi | ಅಮಿತ್‌ ಶಾ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ

Exit mobile version