ದೇವನಹಳ್ಳಿ: ದೇವನಹಳ್ಳಿಯ ಬಿಎಂಟಿಸಿ ಡಿಪೋದಲ್ಲಿ (Bmtc Depot) ನೇಣು ಬಿಗಿದುಕೊಂಡು ಬಿಎಂಟಿಸಿ ಚಾಲಕ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ನಡೆದಿದೆ. ತಾಲೂಕಿನ ಆವತಿ ಮೂಲದ ನಾಗೇಶ್ ( 45 ) ಆತ್ಮಹತ್ಯೆಗೆ ಶರಣಾದ ಚಾಲಕ.
ನಾಗೇಶ್ ಚಾಲಕ ಕಂ ನಿರ್ವಾಹಕನಾಗಿ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದರು. ಜತೆಗೆ ಕೆಲಸದ ಸ್ಥಳದಲ್ಲಿ ಕಿರುಕುಳ ಹೆಚ್ಚಾಗಿತ್ತು ಎನ್ನಲಾಗಿದೆ. ನಿನ್ನೆ ಕೆಲಸ ಮುಗಿಸಿ ಮನೆಗೆ ತೆರಳಿದ್ದ ನಾಗೇಶ್, ಪುನಃ ಮಧ್ಯರಾತ್ರಿ ಡಿಪೋಗೆ ಬಂದಿದ್ದಾರೆ. ಡಿಪೋ ಮ್ಯಾನೇಜರ್ ಕೊಠಡಿ ಎದುರಿಗೆ ಕಾಂಪೌಂಡ್‌ನ ಮೇಲಿದ್ದ ಕಂಬಿಗೆ ಹಗ್ಗದಿಂದ ನೇಣು ಬೀಗಿದುಕೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ಇತರೆ ಸಿಬ್ಬಂದಿ ಇದನ್ನೂ ನೋಡಿ ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಡಿಪೋದಲ್ಲಿ ಈ ದುರ್ಘಟನೆ ನಡೆದಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಟಯರ್ ಸ್ಫೋಟಗೊಂಡು ಕಾರು ಪಲ್ಟಿ, ಕಾನ್‌ಸ್ಟೇಬಲ್ ಸಾವು
ಚಲಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡು (road accident) ಕಾರು ಪಲ್ಟಿಯಾಗಿದ್ದು, ಹೆಡ್ ಕಾನ್‌ಸ್ಟೇಬಲ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ.
ಕಲಬುರಗಿ ನಗರದ ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮೋಯಿಜುದ್ದಿನ್ (52) ಮೃತಪಟ್ಟ ವ್ಯಕ್ತಿ. ಅವರ ಸಹೋದರ ನಜುಮೊದ್ದಿನ್ ಮತ್ತು ಇನ್ನೊಬ್ಬರು ಕೂಡ ಕಾರಿನಲ್ಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿಯಿಂದ ಕಾರಿನಲ್ಲಿ ಮಳಖೇಡಕ್ಕೆ ಹೋಗುವಾಗ ಕಾರಿನ ಟಯರ್ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿದೆ. ಮಳಖೇಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವು
ಬೆಂಗಳೂರು: ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ ಸಾವಿಗೀಡಾಗಿದ್ದಾರೆ. ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯರ್ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತ್ರಿಪುರ ಮೂಲದ ವ್ಯಕ್ತಿ ಮೃತಪಟ್ಟವರು.
ತ್ರಿಪುರ ಮೂಲದ ಬಿಜ್ಜು ಈ ಅಪಘಾತದಲ್ಲಿ ಸಾವನ್ನಪ್ಪಿದ್ದು, ಯಶವಂತಪುರದಿಂದ ಮಲ್ಲೇಶ್ವರಂ ಮೂಲಕ ಅನೂಪ್ ಅಯ್ಯರ್ ಮನೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸಂಬಂಧಿಯೊಬ್ಬನನ್ನು ಡ್ರಾಪ್ ಮಾಡಿ ಬರುತ್ತಿದ್ದ ಬಿಜ್ಜು ವೇಗವಾಗಿ ಬಂದು ರಸ್ತೆ ಬದಿಯಲ್ಲಿ ಇದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಮೃತ ದೇಹವನ್ನು ಪೊಲೀಸರು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಯಶವಂತಪುರ ಸಾಂಚರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ