Site icon Vistara News

Self Harming : ಭೂಮಿ ಪಡೆದು ಪರಿಹಾರ ನೀಡದ ಪ್ರಾಧಿಕಾರ; ಆತ್ಮಹತ್ಯೆಗೆ ಯತ್ನಿಸಿದ ರೈತರು

Kolar self harming by farmer

ಕೋಲಾರ: ಅದು ಚೆನ್ನೈ- ಬೆಂಗಳೂರು (Chennai Bangalore Highway) ನಡುವೆ ನಿರ್ಮಾಣವಾಗುತ್ತಿರುವ ಹೆದ್ದಾರಿ ಯೋಜನೆ. ಆದರೆ ಹೆದ್ದಾರಿಗಾಗಿ ಭೂಮಿ ಕಳೆದುಕೊಂಡ ರೈತರ ಬದುಕು ಬೀದಿಗೆ ಬಂದಿದೆ. ಭೂಮಿ ಪಡೆದುಕೊಂಡು ಪರಿಹಾರ ನೀಡದ (Compensation money) ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ರೈತರು ನಿರಂತರ ಹೋರಾಟ ನಡೆಸುತ್ತಿದ್ದು, ಈ ಬಾರಿ ಅದು ವಿಕೋಪಕ್ಕೆ ತಿರುಗಿತ್ತು. ಅಧಿಕಾರಿಗಳಿಂದ ಪರಿಹಾರ ಸಿಗದ ಹಿನ್ನೆಲೆ ಆತ್ಮಹತ್ಯೆ (Self Harming) ದಾರಿ ಹಿಡಿಯುವ ಮೂಲಕ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಕೋಲಾರ (Kolar News) ಎಸ್​.ಗೊಲ್ಲಹಳ್ಳಿ, ವಡಗೆರೆ ಗ್ರಾಮದಲ್ಲಿ ಪರಿಹಾರ ನೀಡುವ ಮೊದಲೇ ಭೂಮಿ ಸ್ವಾಧೀನಪಡಿಸಿಕೊಂಡು ಪೊಲೀಸರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹೆದ್ದಾರಿ ಕೆಲಸ ಮಾಡಲು ಮುಂದಾಗಿದ್ದಾರೆ. ಈ ವೇಳೆ ಬೇರೆ ದಿಕ್ಕು ಕಾಣದ ಅಲ್ಲಿದ್ದ ರೈತ ಕೃಷ್ಣಮೂರ್ತಿ ಹಾಗೂ ಅವರ ತಂದೆ ವೆಂಕಟೇಶಪ್ಪ ಹಾಗೂ ಅಭಿಲಾಶ್ ಗೌಡ ಎಂಬುವವರು ವಿಷ ಸೇವಿಸಿದ್ದರು. ನಮಗೆ ಪರಿಹಾರ ನೀಡುವವರೆಗೂ ನಾವು ಬಿಡುವುದಿಲ್ಲ ಎಂದಿದ್ದಾರೆ. ಕೂಡಲೇ ಸ್ಥಳದಲ್ಲೇ ಇದ್ದ ಪೊಲೀಸರು ವಿಷ ಕುಡಿದು ಅಸ್ವಸ್ಥಗೊಂಡವರನ್ನು ತಮ್ಮದೇ ವಾಹನದಲ್ಲಿ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಇತ್ತ ವಿಚಾರ ತಿಳಿಯುತ್ತಿದ್ದಂತೆ ಶಾಸಕ ನಂಜೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ರೈತರು

ಇದನ್ನೂ ಓದಿ: Hunting wild boar : ಗ್ರಾಮಸ್ಥರ ಜತೆ ಪ್ರೀತಿಯ ಒಡನಾಟ ಹೊಂದಿದ್ದ ಕಾಡಹಂದಿಯನ್ನು ಬಾಂಬಿಟ್ಟು ಕೊಂದ ದುರುಳರು!

ಕೋಲಾರ ಜಿಲ್ಲೆಯ ಮೂರು ತಾಲೂಕಿನಲ್ಲಿ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಕ್ಸ್ ಹೈವೇ ಹಾದು ಹೋಗಲಿದೆ. ಈ ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರೈತರಿಗೆ ಸರಿಯಾದ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಕೋಲಾರ ತಾಲೂಕಿನ ಎಸ್​.ಗೊಲ್ಲಹಳ್ಳಿ, ಮಾಲೂರು ತಾಲೂಕಿನ ಲಕ್ಷ್ಮೀಸಾಗರ, ಹೂಗೇನಹಳ್ಳಿ, ಬಂಗಾರಪೇಟೆ, ಕೆಜಿಎಫ್​ , ಎನ್​.ಜಿ.ಹುಲ್ಕೂರು ಸೇರಿ ಹಲವೆಡೆ ಹೆದ್ದಾರಿ ಪ್ರಾಧಿಕಾರ ರೈತರ ಜಮೀನುಗಳನ್ನು ವಶಕ್ಕೆ ಪಡೆದುಕೊಂಡಿದೆ. ಆದರೆ ಈವರೆಗೂ ಅವರಿಗೆ ಪರಿಹಾರ ನೀಡಿಲ್ಲ. ಜತೆಗೆ ಭೂಮಿಯಲ್ಲಿದ್ದ ಮರಗಿಡಗಿಳಿಗೂ ಇನ್ನೂ ಪರಿಹಾರ ನೀಡಿಲ್ಲ.

ಈ ಕುರಿತು ಕಳೆದ ಒಂದು ವರ್ಷದಿಂದ ರೈತರು ವಿವಿಧೆಡೆ ಹಲವು ರೀತಿಯಲ್ಲಿ ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ ಅಧಿಕಾರಿಗಳು ಮಾತ್ರ ರೈತರ ಸಮಸ್ಯೆಗಳನ್ನು ಪರಿಹಾರ ಮಾಡದೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ. ಭೂಮಿಯನ್ನೇ ನಂಬಿಕೊಂಡು ಬದುಕುತ್ತಿದ್ದವರಿಂದ ಭೂಮಿ ಕಸಿದುಕೊಂಡು ರೈತರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಇದರಿಂದ ದಿಕ್ಕು ಕಾಣದ ರೈತರು ಆತ್ಮಹತ್ಯೆ ದಾರಿ ತುಳಿದಿದ್ದಾರೆ. ರೈತರು ಕೀಮಿನಾಶಕವನ್ನು ಕುಡಿದಿದ್ದು, ವಿಷವನ್ನು ನಿಯಂತ್ರಿಸಲು ಪ್ರತಿರೋಧ ಔಷಧಿ ಇಲ್ಲ. ಸದ್ಯ ಎಲ್ಲ ರೀತಿಯ ಪ್ರಯತ್ನ ಮಾಡಿದ್ದು, 24 ಗಂಟೆಗಳ ಕಾಲ ತೀವ್ರ ನಿಗಾಘಟಕದಲ್ಲಿ ಇರಿಸಲಾಗಿದೆ ಎಂದು ಕೋಲಾರ ಜಿಲ್ಲಾಸ್ಪತ್ರೆ ವೈದ್ಯೆ ಡಾ.ರಾಧಿಕ ತಿಳಿಸಿದ್ದಾರೆ.

ಬೇರೆಯವರು ಪಾಲಾಯ್ತಾ ಪರಿಹಾರದ ಹಣ?

ಜಮೀನು ಕಳೆದುಕೊಂಡ ರೈತರನ್ನು ಬಿಟ್ಟು ಬೇರೆ ಯಾರಿಗೋ ಪರಿಹಾರ ನೀಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಹೀಗಾಗಿ ಮೂವರು ರೈತರು ಅಧಿಕಾರಿಗಳ ಎದುರಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಸ್.ಗೊಲ್ಲಹಳ್ಳಿ ಗ್ರಾಮದ ಬಳಿ ಆರೋಹಳ್ಳಿ ನಿವಾಸಿ ಕೃಷ್ಣಮೂರ್ತಿ ಎಂಬುವವರ ನಾಲ್ಕು ಎಕರೆ ಭೂಮಿ ಹೆದ್ದಾರಿಗೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಜತೆಗೆ ಲಕ್ಷ್ಮೀಪುರ ಗ್ರಾಮದ ಅಭಿಲಾಶ್ ಗೌಡ ಅವರಿಗೆ ಮೂರು ಎಕರೆ ಭೂಮಿಗೆ ಪರಿಹಾರ ನೀಡಿಲ್ಲ.

ಹಲವು ಬಾರಿ ಅಧಿಕಾರಿಗಳನ್ನು ಕೇಳಲಾಗಿದೆ, ಆದರೆ ಇವರ ಹೆಸರಲ್ಲಿ ಇರುವ ಭೂಮಿಗೆ ಅಧಿಕಾರಿಗಳು ಬೇರೆ ಯಾರಿಗೂ ಪರಿಹಾರ ನೀಡಿ ನಿಮ್ಮದು ಜಮೀನೆ ಇಲ್ಲ ಎಂದಿದ್ದಾರೆ. ಅಲ್ಲದೆ ಈ ವಿಚಾರವನ್ನು ಕೋರ್ಟ್​ನಲ್ಲಿ ಇತ್ಯರ್ಥಿ ಪಡಿಸಿಕೊಳ್ಳಿ ಎಂದು ಕೈತೊಳೆದುಕೊಂಡಿದ್ದಾರೆ. ಹೆದ್ದಾರಿ ಭೂ ಸ್ವಾಧೀನಾಧಿಕಾರಿಗಳ ಯಡವಟ್ಟಿನಿಂದ ಬಡ ರೈತರು ಇತ್ತ ಭೂಮಿಯೂ ಇಲ್ಲದೆ, ಪರಿಹಾರವೂ ಇಲ್ಲದೆ ತ್ರಿಶಂಕು ಸ್ಥಿತಿಗೆ ತಲುಪಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version