Site icon Vistara News

Hemant Nimbalkar: ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್‌ಗೆ ಬಡ್ತಿ

Hemant Nimbalkar

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್‌ (Hemant Nimbalkar) ಅವರಿಗೆ ಬಡ್ತಿ ಸಿಕ್ಕಿದೆ. ಅವರಿಗೆ ಐಜಿಪಿ ದರ್ಜೆಯಿಂದ ಎಡಿಜಿಪಿ ದರ್ಜೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸದ್ಯ ವಾರ್ತಾ ಇಲಾಖೆ ಆಯುಕ್ತರಾಗಿರುವ ಹೇಮಂತ್ ನಿಂಬಾಳ್ಕರ್ ಅವರು, ಬಡ್ತಿ ಬಳಿಕವೂ ವಾರ್ತಾ ಇಲಾಖೆ ಆಯುಕ್ತರಾಗಿಯೇ ಮುಂದುವರಿಯಲಿದ್ದಾರೆ.

1998ನೇ ಬ್ಯಾಚಿನ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾದ ಹೇಮಂತ್‌ ನಿಂಬಾಳ್ಕರ್‌ ಅವರು ಅವರು 2023ರ ಜೂನ್‌ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ನೇಮಕಗೊಂಡಿದ್ದರು. ಈ ಹಿಂದೆ ಬೆಳಗಾವಿ ಎಸ್‌ಪಿ, ಬೆಂಗಳೂರಿನ ಜಂಟಿ ಆಯುಕ್ತ (ಸಿಸಿಬಿ), ಹೆಚ್ಚುವರಿ ಆಯುಕ್ತ (ಪೂರ್ವ), ಹೆಚ್ಚುವರಿ ಆಯುಕ್ತ (ಆಡಳಿತ) ಹಾಗೂ ಸಿಐಡಿ ಐಜಿಪಿ ಸೇರಿದಂತೆ ವಿವಿಧ ಹುದ್ದೆಗಳನ್ನು ಹೇಮಂತ್‌ ನಿಂಬಾಳ್ಕರ್‌ ಅವರು ನಿರ್ವಹಿಸಿದ್ದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಪಿ.ಎಸ್‌ ದಿನೇಶ್‌ ಕುಮಾರ್‌ ಹೆಸರು ಶಿಫಾರಸು

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ (Karnataka High Court) ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿರುವ ಬೆನ್ನಿಗೇ, ಅವರ ಪದೋನ್ನತಿಯಿಂದ ತೆರವಾಗುವ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ (Chief justice of Karnataka High court)  ನ್ಯಾ. ಪಿ.ಎಸ್‌ ದಿನೇಶ್‌ ಕುಮಾರ್‌ (Justice PS Dinesh Kumar) ಅವರ ಹೆಸರನ್ನು ಕೊಲಿಜಿಯಂ (Collegium decision) ಶುಕ್ರವಾರ ಶಿಫಾರಸು ಮಾಡಿದೆ.

ಇದನ್ನೂ ಓದಿ | PSI Exam: ಜ. 23ರಂದು ಪಿಎಸ್‌ಐ ಮರು ಪರೀಕ್ಷೆ; ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಜಾರಿ

“ನ್ಯಾ. ದಿನೇಶ್‌ ಕುಮಾರ್‌ ಅವರು ಹೈಕೋರ್ಟ್‌ ನ್ಯಾಯಾಧೀಶರಾಗಿ ನ್ಯಾಯಾಂಗ ಮತ್ತು ಆಡಳಿತಾತ್ಮಕ ಭಾಗದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಫೆಬ್ರವರಿ 24, 2024ರಂದು ನ್ಯಾ. ದಿನೇಶ್‌ ಕುಮಾರ್‌ ನಿವೃತ್ತರಾಗಲಿದ್ದು, ಮುಖ್ಯ ನ್ಯಾಯಮೂರ್ತಿಯಾಗಿ ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅಧಿಕಾರಾವಧಿಯನ್ನು ಹೊಂದಿರುತ್ತಾರೆ. ಅವರು ಉತ್ಕೃಷ್ಟ ಸಮಗ್ರತೆ, ಪ್ರಾಮಾಣಿಕತೆ ಮತ್ತು ಸಾಮರ್ಥ್ಯಗಳಿಂದ ಗಮನಸೆಳೆದವರಾಗಿದ್ದಾರೆ. ನೇಮಕವಾದಾಗಿನಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾ. ದಿನೇಶ್‌ ಕುಮಾರ್‌ ಮಹತ್ತರ ಸೇವೆ ಸಲ್ಲಿಸಿದ್ದಾರೆ” ಎಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂನ ನಿರ್ಣಯದಲ್ಲಿ ತಿಳಿಸಲಾಗಿದೆ.

ನ್ಯಾಯಮೂರ್ತಿ ದಿನೇಶ್‌ ಕುಮಾರ್ ಅವರು 2015ರಿಂದ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದು, 2024ರ ಫೆಬ್ರವರಿ 24ರಂದು ನಿವೃತ್ತರಾಗಲಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರ ಹಿರಿತನದಲ್ಲಿ, ನ್ಯಾಯಮೂರ್ತಿ ದಿನೇಶ್‌ ಕುಮಾರ್ ಅವರು ಪ್ರಸ್ತುತ ಆಂಧ್ರ ಪ್ರದೇಶ ಹೈಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ನರೇಂದರ್ ಜಿ ನಂತರ ಎರಡನೇ ಹಿರಿಯರಾಗಿದ್ದಾರೆ ಎಂಬ ಅಂಶವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರನ್ನೊಳಗೊಂಡ ಕೊಲಿಜಿಯಂ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

2015 ರಲ್ಲಿ ನ್ಯಾಯಪೀಠಕ್ಕೆ ಬಡ್ತಿ ಪಡೆಯುವ ಮೊದಲು, ನ್ಯಾಯಮೂರ್ತಿ ಕುಮಾರ್ ಅವರು 1990 ರಿಂದ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದರು ಮತ್ತು ವಿವಿಧ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಪ್ರಮುಖ ಪ್ರಕರಣಗಳಲ್ಲಿ ಹಾಜರಾಗಿದ್ದರು.

ವರಾಳೆ ಅವರ ಹೆಸರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಶಿಫಾರಸು

ನ್ಯಾಯಮೂರ್ತಿ ವರಾಳೆ ಅವರು ಆಗಸ್ಟ್ 1985ರಲ್ಲಿ ವಕೀಲರಾಗಿ ನೋಂದಾಯಿಸಿಕೊಳ್ಳುವ ಮೂಲಕ ವೃತ್ತಿ ಜೀವನ ಆರಂಭಿಸಿದರು. ಆರಂಭಿಕ ವರ್ಷಗಳಲ್ಲಿ ವಕೀಲ ಎಸ್ ಎನ್ ಲೋಯಾ ಅವರ ಅಡಿಯಲ್ಲಿ ಪ್ರಾಕ್ಟೀಸ್‌ ಮಾಡಿದರು. 1992ರವರೆಗೆ ಔರಂಗಾಬಾದ್‌ನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. 2008ರ ಜುಲೈ 18ರಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ವರಾಳೆ ಅವರು ಅಕ್ಟೋಬರ್ 15, 2022ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಸರ್ಕಾರಿ ನೌಕರರ ಬೇಡಿಕೆಗಳಿಗೆ ಗಮನ ಕೊಡಿ

“ಹೈಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆಯುವ ಮೊದಲು, ಅವರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಿವಿಲ್, ಕ್ರಿಮಿನಲ್, ಕಾರ್ಮಿಕ ಮತ್ತು ಆಡಳಿತಾತ್ಮಕ ಕಾನೂನು ವಿಷಯಗಳಲ್ಲಿ ಮತ್ತು ಔರಂಗಾಬಾದ್‌ನ ಹೈಕೋರ್ಟ್ ಪೀಠದಲ್ಲಿ ಸಾಂವಿಧಾನಿಕ ವಿಷಯಗಳಲ್ಲಿ 23 ವರ್ಷಗಳ ಕಾಲ ಬಾರ್‌ನಲ್ಲಿ ಪ್ರಾಕ್ಟೀಸ್‌ ಮಾಡಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರ ಅಖಿಲ ಭಾರತ ಜ್ಯೇಷ್ಠತೆಯಲ್ಲಿ ನ್ಯಾಯಮೂರ್ತಿ ವರಾಳೆ ಅವರು 6ನೇ ಸ್ಥಾನದಲ್ಲಿದ್ದಾರೆ. ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರ ಹಿರಿತನದಲ್ಲಿ, ಅವರು ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ” ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

Exit mobile version