Site icon Vistara News

Dr. Mahesh Valvekar: ಹಿರಿಯ ಪತ್ರಕರ್ತ ಡಾ. ಮಹೇಶ ವಾಳ್ವೇಕರಗೆ ಕರ್ನಾಟಕ ವಿವಿ ಡಾಕ್ಟರೇಟ್

doctorate to Dr Mahesh valvekar

ಧಾರವಾಡ: ಕಳೆದ 2 ದಶಕಗಳಿಗಿಂತ ಹೆಚ್ಚು ಕಾಲ ವಿದ್ಯುನ್ಮಾನ, ಬಾನುಲಿ ಹಾಗೂ ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್‌ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ಮಹೇಶ ವಾಳ್ವೇಕರ (Dr. Mahesh Valvekar) ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.

ಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿಕೋತ್ಸವದಲ್ಲಿ ಡಾ. ಮಹೇಶ ವಾಳ್ವೇಕರ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಕುಲಪತಿ ಡಾ. ಗುಡಸಿ ಮತ್ತಿತರ ಗಣ್ಯರು ಪಿಎಚ್‌ಡಿ ಪದವಿ ಪ್ರದಾನ ಮಾಡಿದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಂ. ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ಡಾ. ಮಹೇಶ ವಾಳ್ವೇಕರ ಅವರು ಪತ್ರಿಕೋದ್ಯಮ ವಿಷಯದಲ್ಲಿ ಸಂಶೋಧನೆ ಕೈಗೊಂಡು ಮಹಾ ಪ್ರಬಂಧ ಮಂಡಿಸಿದ್ದರು.

ಇದನ್ನೂ ಓದಿ | Kannada Rajyotsava: ಶತಶತಮಾನಗಳಿಂದ ಕರ್ನಾಟಕ ನಡೆದು ಬಂದ ಹಾದಿ ರೋಚಕ!

ಕಳೆದ 23 ವರ್ಷಗಳಿಂದ ಡಾ. ಮಹೇಶ ವಾಳ್ವೇಕರ ಅವರು ಪತ್ರಿಕೋದ್ಯಮಿಯಾಗಿ ಮಾಧ್ಯಮದ ಎಲ್ಲಾ ಪ್ರಕಾರಗಳಲ್ಲೂ ಸಮರ್ಥವಾಗಿ, ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿದ್ದು, ಹಲವು ಸಂಘ ಸಂಸ್ಥೆಗಳಿಗೆ ಮಾಧ್ಯಮ ತಜ್ಞರಾಗಿ ಹಾಗೂ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.

ಧಾರವಾಡ ಅಕಾಶವಾಣಿ ಕೇಂದ್ರದ ಸುದ್ದಿ ವಿಭಾಗದ ವರದಿಗಾರರಾಗಿ, ವಾರ್ತಾ ವಾಚಕರಾಗಿ ಕರ್ತವ್ಯ ನಿರ್ವಹಿಸಿರುವ ಡಾ. ಮಹೇಶ ವಾಳ್ವೇಕರ, ಉದಯ ಟಿವಿ ಸುದ್ದಿ ವಾಹಿನಿ ಸೇರಿ ಹಲವು ವಿದ್ಯುನ್ಮಾನ ಸುದ್ದಿವಾಹಿನಿಗಳ ಜಿಲ್ಲಾ ವರದಿಗಾರರಾಗಿ ಹಾಗೂ ಮುದ್ರಣ ಮಾಧ್ಯಮದ ಹಲವು ಪತ್ರಿಕೆಗಳ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ದೂರದರ್ಶನ ಚಂದನ ವಾಹಿನಿಯ ವರದಿಗಾರರಾಗಿ, ಸಹಾಯಕ ಸುದ್ದಿ ಸಂಪಾದಕರಾಗಿಯೂ ಸಹ ಕರ್ತವ್ಯ ನಿರ್ವಹಿಸಿ ಜನಮನ್ನಣೆಗೆ ಪಾತ್ರರಾಗಿದ್ದು, ಪ್ರಸ್ತುತ ಕಳೆದ ಎರಡು ವರ್ಷ ಎಂಟು ತಿಂಗಳುಗಳಿಂದ ಕರ್ನಾಟಕ ವಿಧಾನ ಪರಿಷತ್‌ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ | Karnataka Rajyotsava : ಇಸ್ರೋ ಮುಖ್ಯಸ್ಥ ಸೋಮನಾಥ್‌ ಸೇರಿ 68 ಮಂದಿ, 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ

ಗಣ್ಯರ ಅಭಿನಂದನೆ

ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದ ಡಾ ಮಹೇಶ ವಾಳ್ವೇಕರ್ ಅವರಿಗೆ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಕ್ಷಣ ತಜ್ಞ ಡಾ.ಬಸವರಾಜ ಧಾರವಾಡ, ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಬಿ.ಕೊಡ್ಲಿ, ಗಿರೀಶ ಪದಕಿ, ಮುಳ್ಳೂರ್ ಶಿಕ್ಷಕರ ಸಂಘದ ಶ್ಯಾಮ ಮಲ್ಲನಗೌಡರ, ಗುರು ತಿಗಡಿ, ಜಿ.ಆರ್.ಭಟ್, ಬಣಕಾರ್ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version