ಬೆಂಗಳೂರು: ಅತ್ಯಂತ ಕಷ್ಟದ ಸನ್ನಿವೇಶದಲ್ಲಿ ವಿದ್ಯಾಭ್ಯಾಸ ಪಡೆದು ಉದ್ಯಮವನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿಯಾದ ಎಚ್.ಎಸ್.ಶೆಟ್ಟಿ (H S Shetty) ಅವರಿಗೆ ಹುಟ್ಟೂರಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವಲ್ಲಿ ಎಚ್.ಎಸ್.ಶೆಟ್ಟಿ ಅವರಿಗೆ ʻಡಾಕ್ಟರ್ ಆಫ್ ಸೈನ್ಸ್ʼ ನೀಡಿ ಗೌರವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆ.22ರಂದು ಅವರ ಹುಟ್ಟೂರು ಕುಂದಾಪುರದ ಹಾಲಾಡಿಯಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಜನಿಸಿದ ಡಾ ಎಚ್.ಎಸ್.ಶೆಟ್ಟಿ ಹೋಟೆಲ್ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಜತೆಗೆ ಬಟ್ಟೆ ಮತ್ತು ಖಾದ್ಯ ತೈಲ ವಹಿವಾಟು, ಕೃಷಿ ಸಂಬಂಧಿ ಉತ್ಪನ್ನಗಳ ಮಾರಾಟ, ವಿದ್ಯುತ್ ಉತ್ಪಾದನೆ ಹೀಗೆ ಹಲವು ಕ್ಷೇತ್ರಗಳಲ್ಲಿ ಯಶಸ್ವೀ ಉದ್ಯಮಿ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: VTU Convocation : ಎಚ್.ಎಸ್. ಶೆಟ್ಟಿ, ಎ.ವಿ.ಎಸ್ ಮೂರ್ತಿಗೆ ವಿಟಿಯು ಗೌರವ ಡಾಕ್ಟರೇಟ್ ಪ್ರದಾನ
ಮೈಸೂರು ಮರ್ಕೆಂಟೈಲ್ ಕಂಪನಿ ಲಿಮಿಟೆಡ್ ಸ್ಥಾಪಿಸಿ, ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತ ರೈತರಿಗೆ ನೆರವಾಗುತ್ತಿರುವ ಇವರಿಗೆ ಆರು ಬಾರಿ ಬೆಸ್ಟ್ ಎಕ್ಸ್‌ಪೋರ್ಟ್ ಅವಾರ್ಡ್ ಲಭಿಸಿದೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ, ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ವಿಸ್ತಾರ ನ್ಯೂಸ್‌ನ (Vistara News) ಕಾರ್ಯ ನಿರ್ವಾಹಕ ಚೇರ್ಮನ್ (Executive Chairman) ಆಗಿರುವ ಡಾ. ಎಚ್.ಎಸ್. ಶೆಟ್ಟಿ (Dr HS Shetty) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಸೆ. 22ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಹಾಲಾಡಿಯ ಶಾಲಿನಿ. ಜಿ. ಶಂಕರ್ ಕನ್ವೆನ್‌ಶನ್ ಸೆಂಟರ್‌ನಲ್ಲಿ ಡಾ. ಎಚ್.ಎಸ್. ಶೆಟ್ಟಿ ಅವರಿಗೆ ಸನ್ಮಾನ ಸಮಾರಂಭ ನಡೆಸಲಾಗುತ್ತಿದೆ. ಅಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಶಾಸಕ ಕಿರಣ್ ಕುಮಾರ್ ಕೊಡ್ಲಿ ಹಾಗೂ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕ ಹಾಗೂ ಸಿಇಒ ಹರಿಪ್ರಕಾಶ್ ಕೋಣೆಮನೆ ಅವರು ಭಾಗಿಯಾಗಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉದ್ಯಮಿ ಎಂ. ದಿನೇಶ್ ಹೆಗ್ಡೆ, ಹಾಲಾಡಿಯ ಗ್ರಾ. ಪಂ ಅಧ್ಯಕ್ಷ ಅಶೋಕ ಶೆಟ್ಟಿ ಭಾಗವಹಿಸಲಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ