Site icon Vistara News

ಕನ್ನಡ ನಾಮಫಲಕ ತೆರವುಗೊಳಿಸಿ ಎಂದ ಗ್ರಾಪಂ ಅಧ್ಯಕ್ಷೆ ವಿರುದ್ಧ ಆಕ್ರೋಶ

ಕನ್ನಡ

ಬೆಳಗಾವಿ: ಕನ್ನಡಿಗರ ಮೇಲೆ ಎಂಇಎಸ್‌ ಪುಂಡರ ಹಲ್ಲೆ ಪ್ರಕರಣಕ್ಕೆ ಕನ್ನಡ ನಾಮಫಲಕ ಹಾಕಿರುವುದೇ ಮುಖ್ಯ ಕಾರಣ, ಹೀಗಾಗಿ ನಾಮಫಲಕ ತೆರವುಗೊಳಿಸಬೇಕು ಎಂದು ಗ್ರಾಪಂ ಅಧ್ಯಕ್ಷೆ ಕನಕದಾಸ ಯುವಕರ ಮಂಡಳಿಗೆ ಪತ್ರ ಬರೆದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತಾಲೂಕಿನ ಧಾಮನೆ ಗ್ರಾಮದಲ್ಲಿ ಇತ್ತೀಚೆಗೆ ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದರಿಂದ ವಧು-ವರ ಸೇರಿ ಹಲವು ಕನ್ನಡಿಗರ ಮೇಲೆ ಎಂಇಎಸ್‌ ಪುಂಡರು ಹಲ್ಲೆ ಮಾಡಿದ್ದರು. ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದರಿಂದ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಈ ಪ್ರಕರಣಕ್ಕೆ ಗ್ರಾಮದಲ್ಲಿ ಕನ್ನಡ ನಾಮಫಲಕ ಹಾಕಿರುವುದೇ ಕಾರಣ, ಈ ಕೂಡಲೆ ನಾಮಫಲಕ ತೆರವುಗೊಳಿಸಬೇಕು ಎಂದು ಧಾಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯೋಗಿತಾ ಬೆನ್ನಾಳ್ಕರ್‌, ಅಲ್ಲಿನ ಕನಕದಾಸ ಯುವಕರ ಮಂಡಳಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ | ಲಖನೌ, ಉನ್ನಾವೊ ಆರೆಸ್ಸೆಸ್‌ ಕಚೇರಿಗೆ ಬಾಂಬ್‌ ಬೆದರಿಕೆ, ಕನ್ನಡದಲ್ಲೂ ಇತ್ತು ವಾಟ್ಸ್ ಆ್ಯಪ್‌‌ ಮೆಸೇಜ್!

ಧಾಮನೆ ಗ್ರಾಮದ ಕುರುಬರಹಟ್ಟಿಯಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮ ನಗರ ಎಂದು ಕನ್ನಡಿಗರು ನಾಮಫಲಕ ಹಾಕಿದ್ದರು. ಇದಾದ ಎರಡು ತಿಂಗಳ ಬಳಿಕ ಮರಾಠಿಗರು, ಧರ್ಮವೀರ ಛತ್ರಪತಿ ಸಂಭಾಜಿ ನಗರ ಎಂದು ಮರಾಠಿ ನಾಮಫಲಕ ಹಾಕಿದ್ದರು, ಈ ವಿಷಯವಾಗಿ ವಿವಾದ ಉಂಟಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಳಿರುವುದಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

ಕರ್ನಾಟಕದಲ್ಲಿ ಕನ್ನಡ ನಾಮಫಲಕ ಹಾಕೋದೆ ತಪ್ಪಾ,? ಕನ್ನಡ ನಾಮಫಲಕ ಹಾಕಿದ್ರೆ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತಾ? ಎಂದು ಪ್ರಶ್ನಿಸಿರುವ ಕನ್ನಡಪರ ಸಂಘಟನೆಗಳು, ನೋಟಿಸ್ ಮುಟ್ಟಿದ ತಕ್ಷಣ ಕನ್ನಡ ನಾಮಫಲಕ ತೆರವುಗೊಳಿಸಿ ಎಂದು ಗ್ರಾಪಂ ಅಧ್ಯಕ್ಷೆ ಸೂಚಿಸಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಕನ್ನಡ ನಾಮಫಲಕ ತೆರವು ಮಾಡಲ್ಲ. ಒಂದು ವೇಳೆ ಕನ್ನಡ ನಾಮಫಲಕ ತೆರವು ಮಾಡಿದರೆ ʼಧಾಮನೆ ಚಲೋ’ಗೆ ಕರೆ ನೀಡಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ | ಬೆಳಗಾವಿಯಲ್ಲಿ ಬಾಲ ಬಿಚ್ಚುತ್ತಿರುವ ಎಂಇಎಸ್, ಮರಾಠಿಯಲ್ಲಿ ದಾಖಲೆ ಪತ್ರಗಳಿಗೆ ಒತ್ತಾಯ

Exit mobile version