Site icon Vistara News

Shakti scheme : ಜನತಾ ದರ್ಶನಕ್ಕೆ ಫ್ರೀ ಬಸ್‌ ಏರಿದ ಡಿಸಿಗಳು! ರೈಟ್‌ ರೈಟ್‌ ಎಂದ ಗೀತಾ ಶಿವಕುಮಾರ್‌

Deputy Commissioner janaki and gangubai

ಕಾರವಾರ/ ಬಾಗಲಕೋಟೆ/ಬಳ್ಳಾರಿ: ಸರ್ಕಾರದಿಂದ ಉಚಿತ ಬಸ್ (Free Bus service) ಯೋಜನೆಯನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದೀಗ ಸರ್ಕಾರಿ ಅಧಿಕಾರಿಗಳು ಶಕ್ತಿ ಯೋಜನೆ (Shakti scheme) ಅಡಿ ಬಸ್‌ ಏರಿ ಸರ್ಕಾರಿ ಕಾರ್ಯಕ್ರಮಗಳಿಗೆ ಹಾಜರಾಗಿದ್ದಾರೆ. ಎಸಿ ಕಾರುಗಳೇ ಓಡಾಡುತ್ತಿದ್ದವರು ಸರ್ಕಾರಿ ಬಸ್‌ ಪ್ರಯಾಣಿಸಿದ್ದಾರೆ.

ಸರ್ಕಾರದ ಜಿಲ್ಲಾಮಟ್ಟದ ಜನತಾದರ್ಶನ ಕಾರ್ಯಕ್ರಮಕ್ಕೆ ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸರ್ಕಾರಿ ಬಸ್‌ನಲ್ಲಿ ಟಿಕೆಟ್ ಪಡೆದು ತೆರಳಿದರು. ಕಾರವಾರದಿಂದ ಸುಮಾರು 150 ಕಿ.ಮೀ ದೂರವಿರುವ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನಲೆ ಪ್ರತ್ಯೇಕ ವಾಹನಗಳಲ್ಲಿ ತೆರಳಿದರೆ ಸರ್ಕಾರಕ್ಕೆ ಹೊರೆಯಾಗುವ ಉದ್ದೇಶದಿಂದ ಎಲ್ಲ ಅಧಿಕಾರಿಗಳೂ ಒಂದೇ ವಾಹನದಲ್ಲಿ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿತ್ತು.

ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್

ಅದರಂತೆ ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟ ಬಸ್‌ನಲ್ಲಿ ವಿವಿಧ ಇಲಾಖೆಯ ಸುಮಾರು 30ಕ್ಕೂ ಅಧಿಕ ಅಧಿಕಾರಿಗಳು ಪ್ರಯಾಣಿಸಿದ್ದು, ಸಾರಿಗೆ ಸಿಬ್ಬಂದಿ ಮಹಿಳಾ ಅಧಿಕಾರಿಗಳಿಗೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ನೀಡಿದರೆ, ಪುರುಷ ಪ್ರಯಾಣಿಕರು ಹಣ ನೀಡಿ ಟಿಕೆಟ್ ಪಡೆದರು. ಜಿಲ್ಲಾಧಿಕಾರಿ ಗಂಗೂಬಾಯಿ ಅವರ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

ಇದನ್ನೂ ಓದಿ: Theft Case : ಬಸ್ ನಿಲ್ದಾಣ ಕಳವು ಪ್ರಕರಣಕ್ಕೆ ಟ್ವಿಸ್ಟ್; ಬಯಲಾಯ್ತು ಕಳಪೆ ಕಾಮಗಾರಿ!

ಬಾಗಲಕೋಟೆಯಲ್ಲೂ ಫ್ರೀ ಬಸ್‌ ಏರಿದ ಜಿಲ್ಲಾಧಿಕಾರಿ

ಇತ್ತ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಶಕ್ತಿ ಯೋಜನೆಯಡಿ ಶೂನ್ಯ ದರದ‌ ಟಿಕೆಟ್‌ ಪಡೆದು ಬಸ್‌ನಲ್ಲಿ ಪ್ರಯಾಣಿಸಿದರು. ಬಾಗಲಕೋಟೆಯಿಂದ ತೇರದಾಳವರೆಗೆ ಬಸ್‌ನಲ್ಲೇ ಪ್ರಯಾಣಿಸಿದರು. ಮಂಗಳವಾರ ತೇರದಾಳದಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕಾರ್ ಬಿಟ್ಟು ಬಸ್‌‌ನಲ್ಲಿ ಪ್ರಯಾಣಿಸಿದರು.

ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ

ತೇರದಾಳ ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಆಲಿಸಲು ಹೊರಟ ಜಿಲ್ಲಾಧಿಕಾರಿಗಳ ನೇತೃತ್ವ ತಂಡಕ್ಕೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಜತೆಯಾದರು. ಶಕ್ತಿ ಯೋಜನೆಯಡಿ ಡಿಸಿ ಸೇರಿದಂತೆ ಮಹಿಳಾ ಅಧಿಕಾರಿಗಳು ಶೂನ್ಯ ಟಿಕೆಟ್‌ ಪಡೆದರೆ, ಪುರುಷ‌ ಅಧಿಕಾರಿಗಳು ಹಣ ಪಾವತಿಸಿ ಟಿಕೆಟ್‌ ಪಡೆದರು.

ಉಚಿತ ಬಸ್‌ ಪ್ರಯಾಣಿಸಿದ ಗೀತಾ ಶಿವರಾಜಕುಮಾರ್‌

ಬಳ್ಳಾರಿಯಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ನಾರಿ ಶಕ್ತಿ ಸಮಾವೇಶದ ಬಳಿಕ ಗೀತಾ ಶಿವರಾಜಕುಮಾರ್‌ ಕೂಡ ಉಚಿತ ಬಸ್‌ನಲ್ಲಿ ಪ್ರಯಾಣಿಸಿದರು. ಗೀತಾ ಶಿವರಾಜಕುಮಾರ್‌ಗೆ ಸಚಿವ ನಾಗೇಂದ್ರ, ಶಾಸಕ ಭರತ್ ರೆಡ್ಡಿ ಸಾಥ್‌ ನೀಡಿದರು. ಕಾರ್ಯಕ್ರಮದ ಸ್ಥಳದಿಂದ ರಾಯಲ್ ವೃತ್ತದವರೆಗೆ ಪ್ರಯಾಣಿಸಿ, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಆಗುವ ಲಾಭದ ಬಗ್ಗೆ ಜಾಗೃತಿ ಮೂಡಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version