ಕಾಂಗ್ರೆಸ್ನ ಐದು ಗ್ಯಾರಂಟಿ (Congress guarantee)ಗಳಲ್ಲಿ ಒಂದಾದ ‘ಶಕ್ತಿ ಯೋಜನೆ-ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ’ (Free Bus Travel)ಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)ನವರು ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಎದುರು ಬಿಎಂಟಿಸಿ ಬಸ್ಗೆ ಹಸಿರು ನಿಶಾನೆ ತೋರಿಸುವ ಅವರು ಬಳಿಕ ಅದೇ ಬಸ್ನಲ್ಲಿ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಲಿದ್ದಾರೆ. ಅಲ್ಲಿ ಪ್ಲಾಟ್ಫಾರ್ಮ್ 2ರಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಮೂಲಕ ಶಕ್ತಿ ಯೋಜನೆಯಡಿ ಬಿಎಂಟಿಸಿ ಬಸ್ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಉಚಿತ ಪ್ರಯಾಣಕ್ಕೆ ಪ್ರತ್ಯೇಕವಾಗಿಯೇ ಚಾಲನೆ ನೀಡಲಿದ್ದಾರೆ.
ಶಕ್ತಿ ಯೋಜನೆ ಅನುಷ್ಠಾನ ನಿಮಿತ್ತ, ವಿಧಾನಸೌಧ ಮುಂಭಾಗ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಧಾನ ಸೌಧದ ಪೂರ್ವದಲ್ಲಿರುವ ದ್ವಾರದಲ್ಲಿರುವ ಮೆಟ್ಟಿಲುಗಳ ಮೇಲೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆ ಎದುರು 2500 ಆಸನದ ವ್ಯವಸ್ಥೆ ಇದೆ. ನಾಲ್ಕು ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ಸಾರಿಗೆ, ಬಿಬಿಎಂಟಿಸಿಯ ಬಸ್ಗಳು ಬಂದು ಅಲ್ಲಿ ನಿಂತಿವೆ.
ಇನ್ನು ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್ಗೆ ವಾಯುವ್ಯ ಕರ್ನಾಟಕ ಸಾರಿಗೆಯ ಬೈಲಹೊಂಗಲ ಘಟಕದ ಬೆಳಗಾವಿ ಬಸ್, ಕಲ್ಯಾಣ ಕರ್ನಾಟಕ ಸಾರಿಗೆಯ ರಾಯಚೂರು ಬಸ್, ಕೆಎಸ್ಆರ್ಟಿಸಿಯ ಶಿವಮೊಗ್ಗ, ಮೈಸೂರು, ಧರ್ಮಸ್ಥಳ ಬಸ್ಗಳು ಸೇರಿ ಒಟ್ಟು 5 ಬಸ್ಗಳು ಬಂದು ನಿಂತಿದ್ದು, ಇವೆಲ್ಲಕ್ಕೂ ಸಿಎಂ ಹಸಿರು ನಿಶಾನೆ ತೋರಿಸಲಿದ್ದಾರೆ. ಬಸ್ಗಳಿಗೆಲ್ಲ ಹಾರಹಾಕಿ ಸುಂದರವಾಗಿ ಅಲಂಕರಿಸಲಾಗಿದೆ.
ಮೊದಲ ಟಿಕೆಟ್ ಯಾರಿಗೆ?
ಇನ್ನು ಮಹಿಳೆಯರ ಉಚಿತ ಬಸ್ ಸಂಚಾರದ ಯೋಜನೆ ಶಕ್ತಿಯನ್ನು ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲವು ಮಹಿಳೆಯರಿಗೆ ಸಾಂಕೇತಿಕವಾಗಿ ಉಚಿತ ಟಿಕೆಟ್ ನೀಡಲಿದ್ದಾರೆ. ಹೀಗೆ ಮುಖ್ಯಮಂತ್ರಿಯಿಂದ ಉಚಿತ ಟಿಕೆಟ್ ಪಡೆಯುವ ಮೊದಲ ಮಹಿಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಎಂದು ಹೇಳಲಾಗಿದೆ. ಇವರಿಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಿದ್ದರಾಮಯ್ಯನವರು ಉಚಿತ ಬಿಎಂಟಿಸಿ ಬಸ್ ಟಿಕೆಟ್ ಕೊಡಲಿದ್ದಾರೆ. ಈ ಮೂಲಕ ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣಕ್ಕೆ ಮೊದಲ ಟಿಕೆಟ್ ಪಡೆದ ಮೊದಲ ಮಹಿಳೆಯಾಗಲಿದ್ದಾರೆ.