ಶಿವಮೊಗ್ಗ: ಶಿವಮೊಗ್ಗದಲ್ಲಿ ಸಾವಿರಾರು ಹಿಂದು ಕಾರ್ಯಕರ್ತರ ಸಮ್ಮುಖದಲ್ಲಿ ʼಶೌರ್ಯ ಯಾತ್ರೆʼ ಅದ್ಧೂರಿಯಾಗಿ ನೆರವೇರಿತು. ಬಜರಂಗದಳದಿಂದ ಭಾನುವಾರ ಆಯೋಜಿಸಿದ್ದ ಯಾತ್ರೆ (Shaurya Yatra), ನಗರದ ಫ್ರೀಡಂ ಪಾರ್ಕ್‌ನಿಂದ ಆರಂಭವಾಗಿ ಶಿವಪ್ಪನಾಯಕ ಸರ್ಕಲ್ ಮೂಲಕ ಸಾಗಿ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಕೊನೆಗೊಂಡಿತು.
ಪಥ ಸಂಚಲನದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಹಿಂದು ಕಾರ್ಯಕರ್ತರು ಭಾಗಿಯಾಗಿದ್ದರು. ಲವ್ ಜಿಹಾದ್, ಮತಾಂತರ, ಗೋ ಹತ್ಯೆ, ಭಯೋತ್ಪಾದನೆ ವಿರುದ್ಧ ಜನಜಾಗೃತಿ ಮೂಡಿಸಲು ಬಜರಂಗದಳದಿಂದ ಶೌರ್ಯ ಯಾತ್ರೆ ಆಯೋಜನೆ ಮಾಡಲಾಗಿತ್ತು. ಪಥಸಂಚಲನದಲ್ಲಿ ಬಜರಂಗದಳ, ವಿಎಚ್‌ಪಿ, ಹಿಂದುಪರ ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ದರು.
ಪಥ ಸಂಚಲನದ ವೇಳೆ ಹಿಂದು ಪರ ಕಾರ್ಯಕರ್ತರು ಭಾರತ್ ಮಾತಾಕೀ ಜೈ , ಜೈ ಶ್ರೀ ರಾಮ್, ಸ್ವಾತಂತ್ರ್ಯ ವೀರ ಸಾವರ್ಕರ್, ಚಂದ್ರಶೇಖರ್ ಆಜಾದ್, ಹರ್ಷ ಅಮರ್ ರಹೇ ಹಾಗೂ ದುಷ್ಟ ಶಕ್ತಿಗಳು ಬೆದರಲಿ, ಹೆದರಲಿ ಎಂದು ಘೋಷಣೆ ಕೂಗುತ್ತಾ ಸಾಗಿದರು. ಪಥಸಂಚಲನ ಸಾಗುವ ಮಾರ್ಗ ಹಾಗೂ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಎಚ್ಚರಿಕೆ ವಹಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದನ್ನೂ ಓದಿ | Rahul Gandhi T Shirt | ಚಳಿ ನಿಗ್ರಹಕ್ಕೆ ರಾಹುಲ್ ಟಿ ಶರ್ಟ್ ಒಳಗೆ ಥರ್ಮಲ್ ಉಡುಪು, ಕೈ-ಕಮಲ ಕೆಸರೆರಚಾಟ
ಜಿಹಾದಿಗಳಿಗೆ ತಕ್ಕ ಉತ್ತರ ನೀಡಲಾಗುವುದು: ಕೆ.ಆರ್. ಸುನೀಲ್
ಶೌರ್ಯ ಯಾತ್ರೆ ಪಥ ಸಂಚಲನದ ನಂತರ ವಾಸವಿ ಶಾಲೆ ಆವರಣದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ವೇಳೆ ಬಜರಂಗದಳ ಪ್ರಾಂತ ಸಂಯೋಜಕ ಕೆ.ಆರ್. ಸುನೀಲ್ ಮಾತನಾಡಿ, ಲವ್ ಜಿಹಾದ್ ಎಂದು ಹೇಳಿದಾಗ ಸಮಾಜದಲ್ಲಿ ಒಪ್ಪಲಿಲ್ಲ, ಪ್ರೀತಿ ಪ್ರೇಮದ ವಿರೋಧಿ ಎನ್ನಲಾಯಿತು. ಹಿಂದು ಹೆಣ್ಣು ಮಕ್ಕಳನ್ನು ಬಳಸಿಕೊಂಡು, ಇಸ್ಲಾಮೀಕರಣದ ಸಂಚು ಮಾಡಲಾಗುತ್ತಿದೆ. ಕಳೆದ ಕೆಲವೇ ವರ್ಷದಲ್ಲಿ 26 ಹಿಂದು ಕಾರ್ಯಕರ್ತರ ಹತ್ಯೆ ಆಗಿದೆ. ಮುಸ್ಲಿಮನೊಬ್ಬನ ಭಾವನೆಗಳ ಮೇಲೆ ದಾಳಿ ಆದಾಗ ಹತ್ಯೆ ಆಗುತ್ತದೆ. ಆದರೆ, ಹಿಂದುಗಳ ಭಾವನೆಯನ್ನು ಕೆಣಕಿದಾಗ ಸುಮ್ಮನಿರಬೇಕಾ? ಮುಂದಿನ ದಿನಗಳಲ್ಲಿ ಜಿಹಾದಿಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಮಮಂದಿರದ ನಿರಂತರ ಹೋರಾಟಕ್ಕೆ ಈ ಶೌರ್ಯ ಯಾತ್ರೆ ಸಾಕ್ಷಿ. ರಾಮ ಮಂದಿರ ನಿರ್ಮಾಣಕ್ಕೆ 3 ಲಕ್ಷ ಜನರ ಬಲಿದಾನವಾಗಿದೆ. ಶಿವಾಜಿ, ಮಹಾರಾಣಾ ಪ್ರತಾಪ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಂತಹ ಮಹಾನ್ ವ್ಯಕ್ತಿಗಳು ಹಿಂದು ಧರ್ಮದ ರಕ್ಷಣೆಗೆ ಹೋರಾಡಿದ್ದಾರೆ. ದೇಶದಲ್ಲಿ ಕ್ರಿಶ್ಚಿಯನ್ನರು ೨೦೦ ವರ್ಷ ಆಳ್ವಿಕೆ ಮಾಡಿದರು. ಆದರೂ ಹಿಂದು ಸಮಾಜ ಇನ್ನೂ ಉಳಿದಿದೆ. ಮಹಮ್ಮದ್ ಘೋರಿಯಿಂದ ಹಿಡಿದು ಈವರೆಗೂ ಹಿಂದು ಧರ್ಮವನ್ನು ಮುಗಿಸುವ ಪ್ರಯತ್ನ ನಡೆಯಿತು. ಇಸ್ಲಾಂ ಆಕ್ರಮಣ ಮಾಡಿದ ಕಡೆ ಎಲ್ಲ ಸಂಸ್ಕೃತಿ ನಾಶವಾಗಿದೆ. ಆದರೆ, ಭಾರತದಲ್ಲಿ ಹಿಂದು ಧರ್ಮ ಉಳಿದುಕೊಂಡಿದೆ ಎಂದು ಹೇಳಿದರು.
ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಜಿ.ಬಸವರಾಜ್ ಮಾತನಾಡಿ, ಮುಸಲ್ಮಾನರು ಈ ದೇಶವನ್ನು ಲೂಟಿ ಮಾತ್ರ ಮಾಡಲಿಲ್ಲ. ಬಾಬರ್‌ನಂತಹವರು ದೇಶದ ಶ್ರದ್ಧಾ ಕೇಂದ್ರಗಳು, ಸಂಸ್ಕೃತಿ ನಾಶ ಮಾಡುವ ಕೆಲಸ ಮಾಡಿದರು. ದೇಶ, ಮಂದಿರ, ಸಂಸ್ಕೃತಿ ರಕ್ಷಣೆಗೆ ಸಾವಿರಾರು ತರುಣರು ಪ್ರಾಣ ತೆತ್ತಿದ್ದಾರೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಇದನ್ನು ಸರಿ ಮಾಡುವ ಪ್ರಯತ್ನವನ್ನು ಅಂದಿನ ರಾಜಕಾರಣಿಗಳು ಮಾಡಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಬಜರಂಗದಳ ಅಸ್ತಿತ್ವಕ್ಕೆ ಬಂದ ನಂತರ 1992ರ ಡಿ. 6 ರಂದು ಕಳಂಕಿತ ಕಟ್ಟಡವನ್ನು ಕೆಡವಲಾಯಿತು. ನಮ್ಮ ಸ್ವಾಭಿಮಾನ, ಶೌರ್ಯವನ್ನು ಮೆರೆದ ಆ ದಿನ ಗೀತಾ ಜಯಂತಿ ಕೂಡ ಇತ್ತು. ಮತಾಂತರ ತಡೆ, ಗೋ ರಕ್ಷಣೆ, ಸಂಸ್ಕೃತಿ ರಕ್ಷಣೆಗೆ ಬಜರಂಗದಳದ ಕಾರ್ಯಕರ್ತರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದು ಧರ್ಮಕ್ಕೆ ದ್ರೋಹ ಮಾಡುವವರಿಗೆ ಎಚ್ಚರಿಕೆ ನೀಡಲು ಶೌರ್ಯ ಯಾತ್ರೆ ಮಾಡಿದ್ದೇವೆ ಎಂದು ಹೇಳಿದರು.
ಶಿವಮೊಗ್ಗದಂತಹ ನಗರದಲ್ಲೂ ದೇಶ ವಿರೋಧಿ ಕೃತ್ಯ ಮಾಡುತ್ತಾರೆ. ಅಂತಹ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುವವರು ನಮ್ಮ ನಡುವೆ ಇದ್ದಾರೆ. ಆಟೋ ಇರಲಿ, ಅವರ ಮನೆಯಲ್ಲಿ ಸ್ಫೋಟವಾದರೂ ಮತಕ್ಕಾಗಿ ಓಲೈಕೆ ಮಾಡುತ್ತಾರೆ. ಇಂತಹ ದೇಶ ವಿರೋಧಿಗಳಿಗೆ ಎಚ್ಚರಿಕೆ ನೀಡಲು ಬಜರಂಗದಳ ಶೌರ್ಯ ಯಾತ್ರೆ ಆಯೋಜಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿ | Karnataka Election : ಕಾಂಗ್ರೆಸ್-ಬಿಜೆಪಿ ನಡುವೆ ಥಟ್ ಅಂತ ಹೇಳಿ ಫೈಟ್; ಶಿಕ್ಷಕರ ನೇಮಕಾತಿ ಅಕ್ರಮ V/S 40% ಕಮಿಷನ್