Site icon Vistara News

Shimoga News | ಹಿರಿಯರು ಕಿರಿಯರೊಂದಿಗೆ ಸೇರಿ ಮನೋರಂಜನೆಯಲ್ಲಿ ತೊಡಗುವುದು ಉತ್ತಮ ಹವ್ಯಾಸ: ಕೆ.ಎಸ್.ಈಶ್ವರಪ್ಪ

District Level Sports Meet KS Eshwarappa

ಶಿವಮೊಗ್ಗ: ಹಿರಿಯರು ತಮ್ಮ ಕುಟುಂಬದ ಕಿರಿಯರೊಂದಿಗೆ ಸೇರಿ ದೈನಂದಿನ ಕೆಲ ಸಮಯವನ್ನಾದರೂ ಕ್ರೀಡೆ ಹಾಗೂ ಮನೋರಂಜನೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಹವ್ಯಾಸಗಳಲ್ಲೊಂದಾಗಿದೆ ಎಂದು ಶಾಸಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ಶನಿವಾರ (ಡಿ.೧೭) ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುವ ವಿವಿಧ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರಿ ನೌಕರರ ಪಾತ್ರ ಪ್ರಮುಖವಾದುದು. ಆರೋಗ್ಯ ಸುಧಾರಣಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರವು ರೂಪಿಸಿರುವ ಹಲವು ಯೋಜನೆಗಳ ಅನುಷ್ಠಾನದಿಂದಾಗಿ ದೇಶದಲ್ಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೆರೆಯ ರಾಜ್ಯದ ಪ್ರತಿನಿಧಿಗಳು ವೀಕ್ಷಿಸಿ ಅನುಸರಿಸುತ್ತಿರುವುದು ಸಂತಸದ ಸಂಗತಿ ಎಂದರು.

ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳ ಶುಭಾರಂಭಗೊಳ್ಳುವುದು ಶಿವಮೊಗ್ಗದಿಂದಲೇ. ಇಲ್ಲಿನ ಅಧಿಕಾರಿ-ಸಿಬ್ಬಂದಿಯ ಪರಿಶ್ರಮದಿಂದ ಬಹುತೇಕ ಎಲ್ಲ ಯೋಜನೆಗಳು ಯಶಸ್ವಿಯಾಗಿ ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ಬಂದಿವೆ. ಅದಕ್ಕಾಗಿ ಎಲ್ಲ ಅಧಿಕಾರಿಗಳು ಅಭಿನಂದನಾರ್ಹರು. ಹರ್ ಘರ್ ಜಲ್ ಯೋಜನೆಯಡಿ ಜಿಲ್ಲೆಯ ಪ್ರತಿ ಮನೆಮನೆಗೆ ನೀರು ಒದಗಿಸುವಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದರು.

ಜಿಲ್ಲೆಯಲ್ಲಿ ಆಶ್ರಯ ಯೋಜನೆಯಡಿ ಸುಮಾರು ೩೦೦೦ ಮನೆಗಳನ್ನು ನಿರ್ಮಿಸಲಾಗಿದೆ. ಕೇಂದ್ರ ಪುರಸ್ಕೃತ ಸ್ಮಾರ್ಟ್ ಸಿಟಿ ಯೋಜನೆಯು ಅತಿ ವೇಗದಲ್ಲಿ ಸಾಗುತ್ತಿದೆ. ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗುವ ಎಲ್ಲ ಸ್ಪರ್ಧಿಗಳು ರಾಜ್ಯ ಮಟ್ಟದಲ್ಲಿ ವಿಜೇತರಾಗಿ ಬರುವಂತೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ದಿನನಿತ್ಯ ಒತ್ತಡದಲ್ಲಿ ದಿನ ಕಳೆಯುವ ನೌಕರರು ಕೆಲ ಸಮಯವಾದರೂ ಎಲ್ಲ ಒತ್ತಡಗಳಿಂದ ಹೊರ ಬಂದು ನೆಮ್ಮದಿಯ ಕ್ಷಣಗಳನ್ನು ಕಳೆಯಲು, ಇಲಾಖೆಗಳ, ಅಧಿಕಾರಿ-ಸಿಬ್ಬಂದಿಗಳೊಂದಿಗೆ ಸ್ನೇಹದ ವಾತಾವರಣ ನಿರ್ಮಿಸುವಲ್ಲಿಯೂ ಈ ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು.

ಪ್ರತಿಯೊಬ್ಬರೂ ಪ್ರತಿನಿತ್ಯ ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ಸಕ್ರಿಯರಾಗುವುದರಿಂದ, ಯೋಗ-ಧ್ಯಾನ ಮುಂತಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಉಲ್ಲಾಸ ಹಾಗೂ ಕಾರ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಉತ್ತೇಜನ ದೊರೆಯಲಿದೆ ಎಂದರು.

ಇದನ್ನೂ ಓದಿ | Blind Cricket World Cup | ಅಂಧರ ವಿಶ್ವ ಕಪ್​ನಲ್ಲಿ ಮೂರನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿ ದಾಖಲೆ ಬರೆದ ಭಾರತ

ಪ್ರಸಕ್ತ ಸರ್ಕಾರವು ನೌಕರರ ಸ್ನೇಹಿಯಾಗಿದ್ದು, ನೌಕರರ ಅಗತ್ಯಗಳಿಗೆ ಪೂರಕವಾಗಿ ಸ್ಪಂದಿಸಿದೆ. ಅದಕ್ಕಾಗಿ ಸಹಕರಿಸಿದ ಎಲ್ಲ ಶಾಸಕರು, ಸಚಿವರು, ಉನ್ನತ ಮಟ್ಟದ ಅಧಿಕಾರಿಗಳು ಅಭಿನಂದನಾರ್ಹರು. ನೌಕರರ ಆರೋಗ್ಯ ಯೋಜನೆ ಜನವರಿಯಲ್ಲಿ ಅನುಷ್ಠಾನಗೊಳ್ಳಲಿದೆ. ಜಿಲ್ಲೆಯಲ್ಲಿ ಜನವರಿಯಲ್ಲಿ ನೌಕರರಿಗಾಗಿ ಕ್ಯಾಂಟೀನ್ ಆರಂಭಗೊಳ್ಳುತ್ತಿದ್ದು, ಶೇ.೧೦ ರಿಂದ ೫೦ರವರೆಗೆ ರಿಯಾಯಿತಿ ದರದಲ್ಲಿ ದಿನ ಬಳಕೆಯ ವಸ್ತುಗಳು ದೊರೆಯಲಿವೆ. ಜಿಲ್ಲೆಯ ನೌಕರರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿವೇಶನಗಳನ್ನು ವಿತರಿಸಲಾಗುತ್ತಿದೆ. ನೌಕರರ ಕುಟುಂಬ ಹಾಗೂ ಅವರ ಅವಲಂಬಿತರ ಮದುವೆ, ಸಭೆ-ಸಮಾರಂಭಗಳಿಗಾಗಿ ಅತ್ಯಾಧುನಿಕ ಸಭಾ ಭವನವನ್ನು ಸಜ್ಜುಗೊಳಿಸಲಾಗಿದೆ. ಈ ಭವನದ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರವು ಸುಮಾರು ೧೮ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಈ ಅನುದಾನ ಬಿಡುಗಡೆಗೊಳಿಸಿದ ಮಾನ್ಯ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿನಂದನಾರ್ಹರು. ಈ ಭವನಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನೇ ನಾಮಕರಣಗೊಳಿಸಲು ನಿರ್ಣಯಿಸಲಾಗಿದೆ. ನೌಕರರ ಕೌಟುಂಬಿಕ ಅನುಕೂಲಗಳಿಗಾಗಿ ಅತ್ಯಂತ ಕಡಿಮೆ ದರದಲ್ಲಿ ಹಾಗೂ ಅರ್ಜಿ ಸಲ್ಲಿಸಿದ ಒಂದು ಗಂಟೆಯೊಳಗಾಗಿ ೧೦ರೂ.ಗಳವರೆಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ ಎಂದರು.

ಇದನ್ನೂ ಓದಿ | Indian Cricket | ಈಶಾನ್ಯ ರಾಜ್ಯಗಳಲ್ಲಿ ತಲೆ ಎತ್ತಲಿವೆ ಒಳಾಂಗಣ ಕ್ರಿಕೆಟ್​ ತರಬೇತಿ ಕೇಂದ್ರಗಳು


ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಭೋಜೆಗೌಡ, ಡಿ.ಎಸ್.ಅರುಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಷಡಾಕ್ಷರಿ, ಆರ್.ಮೋಹನ್‌ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಡಿ.ಪ್ರಕಾಶ್ ಅವರು ಧ್ವಜಾರೋಹಣ ನೆರವೇರಿಸಿ, ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶ್ರೀಮತಿ ವಾಣಿ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಅವರು ಸ್ವಾಗತಿಸಿ ವಂದಿಸಿದರು.


ಸಭಾ ಕಾರ್ಯಕ್ರಮದ ನಂತರ ನೆಹರೂ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ, ನೌಕರರ ಸಂಘದ ಸಭಾಂಗಣಗಳಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಿಲ್ಲೆಯ ನೌಕರರು ಭಾಗವಹಿಸಿದ್ದರು.

ಇದನ್ನೂ ಓದಿ | Shimoga News | ಭಗವದ್ಗೀತೆ ಜಗತ್ತಿನ ಶ್ರೇಷ್ಠ ಗ್ರಂಥ: ಸಂಬಿತ್ ಪಾತ್ರ

Exit mobile version