Site icon Vistara News

Shimoga News | ಕುಗ್ರಾಮಗಳಲ್ಲಿ ಪತ್ರಕರ್ತರ ವಾಸ್ತವ್ಯ: ಗ್ರಾಮದ ಅಭಿವೃದ್ಧಿ ಕುರಿತು ಸರಕಾರಕ್ಕೆ ಸಮಗ್ರ ವರದಿ

Journalists Association Shimoga Press Trust kugrama

ಶಿವಮೊಗ್ಗ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನೂತನ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ್ದು, ಇದರ ಮುಂದುವರಿದ ಭಾಗವಾಗಿ ಜಿಲ್ಲೆಯಲ್ಲಿರುವ ಕುಗ್ರಾಮಗಳನ್ನು ಗುರುತಿಸಿ ಅಲ್ಲಿ ಗ್ರಾಮ ವಾಸ್ತವ್ಯವನ್ನು ಮಾಡುವ ಮೂಲಕ ಅಲ್ಲಿಯ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗೋಪಾಲ್ ಎಸ್.ಯಡಗೆರೆ ಹೇಳಿದರು.

ಇಲ್ಲಿನ ಪ್ರೆಸ್‌ ಟ್ರಸ್ಟ್‌ ನಲ್ಲಿ ಗುರುವಾರ (ಡಿ.೧೫) ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ನಡೆ ಸಮಾಜದ ಕಡೆ ಘೋಷಣೆಯಡಿ ಸಂಗವು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಜಿಲ್ಲೆಯ ಅತ್ಯಂತ ಹಿಂದುಳಿದ ಗ್ರಾಮಗಳನ್ನು ಸಾರ್ವಜನಿಕರು, ವಿವಿಧ ಸಂಘಟನೆಗಳು, ಸಂಘ-ಸಂಸ್ಥೆಗಳು ತಿಳಿಸಿದರೆ, ಆ ಎಲ್ಲ ಗ್ರಾಮಗಳಿಗೆ ಪತ್ರಕರ್ತರ ತಂಡ ಭೇಟಿ ನೀಡಿ ಮೂರು ಗ್ರಾಮಗಳನ್ನು ಅಂತಿಮಗೊಳಿಸಲಾಗುವುದು. ಆ ಮೂರು ಕುಗ್ರಾಮಗಳಲ್ಲಿ ಪತ್ರಕರ್ತರು ಒಂದು ದಿನ ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳನ್ನು ಸುದ್ದಿ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಪ್ರಕಟಗೊಂಡ ಎಲ್ಲ ವರದಿಗಳನ್ನು ಕ್ರೋಡೀಕರಿಸಿ ಅಂತಿಮ ವರದಿಯನ್ನು ಸಿದ್ಧಗೊಳಿಸಿ ಆಯಾ ಗ್ರಾಮದ ವ್ಯಾಪ್ತಿಯ ಶಾಸಕರು, ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ಗ್ರಾಮದ ಅಭಿವೃದ್ಧಿ ಕುರಿತು ಸಮಗ್ರ ವರದಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ಸರ್ಕಾರಕ್ಕೆ ವರದಿ ನೀಡಿದ ಬಳಿಕ ಅದರ ಪ್ರಗತಿ ಕುರಿತು ಸಂಘ ನಿರಂತರವಾಗಿ ಪ್ರಯತ್ನಿಸಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ | ಬಿ.ಎಸ್‌. ಯಡಿಯೂರಪ್ಪ ನಮ್ಮ ಪಿತಾಮಹ: ಹಾಡಿ ಹೊಗಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ

ಪತ್ರಕರ್ತರ ಸಂಘಟನೆ ಇತಿಹಾಸದಲ್ಲಿ ಮೊದಲ ಬಾರಿ ಈ ರೀತಿಯ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರ ಜತೆಗೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಉದ್ದೇಶದಿಂದ ವರ್ಷ ಪೂರ್ತಿ ಮಾದಕ ವಸ್ತು ವಿರೋಧಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕುಗ್ರಾಮಗಳನ್ನು ತಿಳಿಸಲು ಸಾವರ್ಜನಿಕರು ಸಂಘದ ಅಧ್ಯಕ್ಷ ಗೋಪಾಲ್ ಎಸ್.ಯಡಗೆರೆ (೯೧೦೮೮೨೫೪೫೪), ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ (೯೩೪೧೧೨೬೩೪೦) ಅವರನ್ನು ಸಂಪರ್ಕಿಸಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಖಜಾಂಚಿ ಶಿವಮೊಗ್ಗ ನಂದನ್ ಇದ್ದರು.

ಇದನ್ನೂ ಓದಿ | Rahul Gandhi | ಆರೆಸ್ಸೆಸ್‌ನಲ್ಲಿ ಮಹಿಳಾ ಕಾರ್ಯಕರ್ತರು ಏಕೆ ಇಲ್ಲ? ಇದು ಸ್ತ್ರೀ ಶೋಷಣೆ : ರಾಹುಲ್‌ ಗಾಂಧಿ

Exit mobile version