ಶಿವಮೊಗ್ಗ: ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ರಾಜ್ಯದ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತವನ್ನು ಖರೀದಿಸಲು ಉದ್ದೇಶಿಸಿದ್ದು, ಜ.1 ರಿಂದ ಮಾ.31 ರವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಗಳ ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತ ಖರೀದಿಸಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ತಮ್ಮ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಡಿ.೧೨) ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿಗೊಂದರಂತೆ ಪ್ರತಿ ತಾಲೂಕಿನಲ್ಲಿ ಖರೀದಿ ಕೇಂದ್ರ ಆರಂಭಗೊಳ್ಳಲಿದೆ. ರೈತರ ನೋಂದಣಿಯನ್ನು ಆಧರಿಸಿ, ಶಿರಾಳಕೊಪ್ಪ ಮತ್ತು ಆನವಟ್ಟಿಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಸೂಚಿಸಲಾಗುವುದು ಎಂದರು.
ಕಳೆದ ಸಾಲಿನಲ್ಲಿ ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ 1940 ರೂ.ವನ್ನು ನಿಗದಿಪಡಿಸಲಾಗಿತ್ತು. ಅದನ್ನು ಈ ಬಾರಿ 2,040 ರೂಪಾಯಿಗೆ ಹೆಚ್ಚಿಸಲಾಗಿದೆ. ಪ್ರತಿ ಕ್ವಿಂಟಾಲ್ ಗ್ರೇಡ್-ಎ ಭತ್ತಕ್ಕೆ ನಿಗದಿಪಡಿಸಲಾಗಿದ್ದ ದರ 1,960 ರೂಪಾಯಿವನ್ನು 2,060 ರೂಪಾಯಿಗೆ ಹೆಚ್ಚಿಸಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಭತ್ತ ಖರೀದಿ ಪ್ರಕ್ರಿಯೆ ನಡೆಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಏಜೆನ್ಸಿಗಳನ್ನಾಗಿ ನೇಮಿಸಲಾಗಿದೆ. ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಗರಿಷ್ಠ 40 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುವುದು. ರೈತರು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ಐಡಿಯೊಂದಿಗೆ ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡಲು ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅರ್ಹ ರೈತರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಏಜೆನ್ಸಿಯವರು ಭತ್ತ ಖರೀದಿಸಿದ ನಂತರ ರೈತರ ಬ್ಯಾಂಕ್ ಖಾತೆಗಳಿಗೆ 15 ದಿನಗಳೊಳಗಾಗಿ ಹಣವನ್ನು ನೇರ ನಗದು ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ | CBSE Exam Date | ವಿದ್ಯಾರ್ಥಿಗಳೇ ಗಮನಿಸಿ, ಜಾಲತಾಣಗಳಲ್ಲಿರುವ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ನಕಲಿ
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಸಂಗ್ರಹಣಾ ಏಜೆನ್ಸಿಯ ಭತ್ತ ಖರೀದಿ ಕೇಂದ್ರಕ್ಕೆ ಗ್ರೇಡರ್‌ಗಳ ನೇಮಕ, ತಪಾಸಣೆ, ಮತ್ತಿತರ ವಿಷಯಗಳ ಕುರಿತು ಕೃಷಿ ಇಲಾಖಾ ಅಧಿಕಾರಿಗಳು ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಏಜೆನ್ಸಿಯವರು ಜಿಲ್ಲೆಯ ರೈತರಿಂದ ಭತ್ತವನ್ನು ಖರೀದಿಸಿ, ಗೋದಾಮುಗಳಲ್ಲಿ ಸಂಗ್ರಹಿಸಿ, ಭತ್ತದ ಹಲ್ಲಿಂಗ್‍ಗಾಗಿ ನೋಂದಾಯಿತ ಅಕ್ಕಿ ಗಿರಣಿಗಳಿಗೆ ಸಾಗಾಣಿಕೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುವ ಅಕ್ಕಿಯನ್ನು ಕಡ್ಡಾಯವಾಗಿ ಸಾರವರ್ಧಿತಗೊಳಿಸಬೇಕಾಗಿರುವುದರಿಂದ ಅಕ್ಕಿ ಗಿರಣಿಗಳಲ್ಲಿ ಬ್ಲೆಂಡರ್ ಯಂತ್ರವನ್ನು ಅಳವಡಿಸಿಕೊಂಡಿರುವ ಅಕ್ಕಿ ಗಿರಣಿಗಳನ್ನು ಮಾತ್ರ ಭತ್ತ ಹಲ್ಲಿಂಗ್ ಮಾಡಲು ನೋಂದಾಯಿಸಿಕೊಂಡು ನಿಯಮಾನುಸಾರ ಮಿಶ್ರಣಗೊಳಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಅವೀನ್ ಆರ್. ಸೇರಿದಂತೆ ಆಹಾರ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆಗಳ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | Leaf Spot Disease | ಅಡಿಕೆ ಎಲೆ ಚುಕ್ಕಿ ರೋಗದ ಕುರಿತು ಇಸ್ರೇಲ್ ವಿಜ್ಞಾನಿಗಳ ಜತೆ ಚರ್ಚಿಸಲಿರುವ ಸಚಿವ ಮುನಿರತ್ನ