ಶಿವಮೊಗ್ಗ: ಕಳೆದ 40-50 ವರ್ಷಗಳಿಂದ ನಿವೇಶನವಿಲ್ಲದೆ ಪರದಾಡುತ್ತಿರುವ ಕೊಳಚೆ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಸುಮಾರು 150 ಕುಟುಂಬಗಳಿಗೆ ಸರ್ಕಾರಿ ಜಮೀನನ್ನು ಕಾಯ್ದಿರಿಸಿ, ಅಭಿವೃದ್ಧಿಪಡಿಸಿ, ಕೊಳಚೆ ನಿವಾಸಿಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಶಿವಮೊಗ್ಗದಲ್ಲಿ (Shimoga News) ಬುಧವಾರ (ಡಿ.೨೮) ಧರಣಿ ನಡೆಸಲಾಯಿತು.
ನಗರದಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಶಿವಮೊಗ್ಗ ನಗರದ ವಾರ್ಡ್ ನಂ. 02ರಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಸುಮಾರು 150 ಕುಟುಂಬಗಳು ನವುಲೆ, ಅಂಬೇಡ್ಕರ್ ಕಾಲೋನಿಯಲ್ಲಿ ವಾಸವಾಗಿದ್ದು, ತುಂಗಾ ನಾಲೆಯ ಎಡ ಭಾಗ ಮತ್ತು ಬಲ ಭಾಗದಲ್ಲಿ ಕಿರಿದಾದ ಮನೆಯನ್ನು ಕಟ್ಟಿಕೊಂಡು, ಒಂದು ಮನೆಯಲ್ಲಿ ಮೂರ್ನಾಲ್ಕು ಸಂಸಾರಗಳು ಜೀವನ ನಡೆಸುತ್ತಿವೆ.
ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಕೊಳಚೆ ನಿವಾಸಿಗಳ ಸ್ಥಿತಿಗತಿಗಳನ್ನು ಈಗಾಗಲೇ ಅಧ್ಯಯನ ಮಾಡಿದ್ದು, ಸದರಿ ಗ್ರಾಮದ ಸರ್ವೇ ನಂ.72 ರಲ್ಲಿರುವ ಸುಮಾರು 03-32 ಎ-ಗು ಸರ್ಕಾರಿ ಜಮೀನನ್ನು ಕೊಳಚೆ ನಿವಾಸಿಗಳ ಸಂಘಕ್ಕೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಕೊಳಚೆ ನಿವಾಸಿಗಳ ಸಂಘದ ಹೆಸರಿಗೆ ಜಮೀನನ್ನು ಖಾತೆ ಪಹಣಿ ಮಾಡಿಕೊಟ್ಟು, ಅರ್ಹ ಫಲಾನುಭವಿಗಳಾದ 150 ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ | KEA Recruitment 2022 | ವಿಧಾನ ಸಭೆ ಸಚಿವಾಲಯದಲ್ಲಿ ನೇಮಕ; ಕೀ ಉತ್ತರ ಪ್ರಕಟ
ಈಗಾಗಲೇ ವಾಸ ಮಾಡುತ್ತಿರುವ ತುಂಗಾ ಎಡದಂಡೆ ಮತ್ತು ಬಲದಂಡೆಯ ನಾಲೆಯ ಪಕ್ಕದಲ್ಲಿರುವ ಬಡವರಿಗೆ ಮಳೆಗಾಲ ಬಂತೆಂದರೆ ಇಡೀ ನಗರದ ಕೊಳಚೆಯು ಚಾನಲ್ ಮುಖಾಂತರ ಬಂದು ಬಡವರ ಮನೆಗಳಿಗೆ ನುಗ್ಗುತ್ತಿದ್ದು, ಬಡವರು ಅನೇಕ ರೋಗ ರುಜಿನಗಳಿಂದ ನರಳಾಡುವ ಸ್ಥಿತಿ ಉಂಟಾಗಿದೆ. ಚಿಕ್ಕ ಮಕ್ಕಳು ಆಟವಾಡುವ ಸಮಯದಲ್ಲಿ ನೀರಿನಲ್ಲಿ ಜಾರಿ ಮೃತಪಟ್ಟಿರುವ ಉದಾಹರಣೆಗಳು ಸಹ ಇವೆ ಎಂದು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿದರು. ಈ ವಿಚಾರವಾಗಿ ವಿಳಂಬ ನೀತಿ ಅನುಸರಿಸಿದ್ದೇ ಆದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣಾಂತ ಉಪವಾಸ ಮಾಡಲಾಗವುದೆಂದು ಎಚ್ಚರಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರಮಘಟ್ಟ ರಂಗಪ್ಪ, ಅಧ್ಯಕ್ಷ ಆರ್.ಶೇಷಪ್ಪ ಹಾಗೂ ಇತರರು ಪ್ರತಿಭಟನೆಯಲ್ಲಿ ಇದ್ದರು.
ಇದನ್ನೂ ಓದಿ | ಶಿರಸಿ ಪ್ರತ್ಯೇಕ ಜಿಲ್ಲೆ | ಪಕ್ಷಾತೀತವಾಗಿ ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ ನಿಯೋಗ: ಸಕಾರಾತ್ಮಕ ಸ್ಪಂದನೆ