Site icon Vistara News

Shimoga News | ಕೇಂದ್ರ ಸರ್ಕಾರದ ಆಮದು ನೀತಿಯಿಂದ ಅಡಕೆ ಧಾರಣೆ ಕುಸಿತ: ರಮೇಶ್ ಹೆಗ್ಡೆ ಆರೋಪ

Ramesh Hegde Arecanut Import Policy

ಶಿವಮೊಗ್ಗ: ಅಡಕೆ ಧಾರಣೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ನೀತಿ ಕಾರಣ ಎಂದು ಪಾಲಿಕೆ ಸದಸ್ಯ, ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ ಆರೋಪಿಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸೋಮವಾರ (ಡಿ.೧೨) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂತಾನ್ ಅಡಕೆಗೆ ಭಾರತದ ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟ ಪರಿಣಾಮ ಈಗ ಅಡಕೆ ಕ್ವಿಂಟಾಲ್‌ಗೆ 20 ಸಾವಿರ ರೂಪಾಯಿ ಕುಸಿದಿದೆ ಎಂದರು.

ದೇಶದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಅಡಕೆ ಉತ್ಪಾದನೆ ಆಗಲಿದೆ. ಶೇ. 80ರಷ್ಟು ಬೆಳೆ ಕರ್ನಾಟಕದ ಅಡಕೆ ಉತ್ಪಾದನೆಯಿಂದ ಪೂರೈಸಲಾಗುತ್ತಿದೆ. 13 ಸಾವಿರ ಮೆಟ್ರಿಕ್ ಟನ್ ಭೂತಾನ್‌ನಿಂದ ಪ್ರತಿ ವರ್ಷ ಆಮದಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ರಾಜ್ಯದ ಅಡಕೆಗೆ ಬೆಲೆ ಕುಸಿಯುವಂತಾಗಿದೆ ಎಂದು ಆರೋಪಿಸಿದರು.

ಕ್ವಿಂಟಾಲ್‌ಗೆ 59 ಸಾವಿರ ರೂ. ಅಡಕೆ ಬೆಲೆ ಇಂದು 39 ಸಾವಿರ ರೂ.ಪಾಯಿಗೆ ಕುಸಿದಿದೆ. ಮಿಜೋರಾಂ, ಮಣಿಪುರದ ಮೂಲಕ ಅಡಕೆ ಕಳ್ಳ ಸಾಗಾಣಿಕೆ ಆಗುತ್ತಿದೆ. ಮಿಜೋರಾಂನ ಕಾಂಗ್ರೆಸ್ ನಾಯಕರು ಮೋದಿಗೆ ಪತ್ರ ಬರೆದು ಇದನ್ನು ತಡೆಯಲು ಕೋರಿದ್ದರು. ಆದರೆ, ಉತ್ತರ ಭಾರತ ಅದರಲ್ಲೂ ಗುಜರಾತ್, ರಾಜಸ್ಥಾನ ಮೊದಲಾದ ರಾಜ್ಯಗಳ ಗುಟ್ಕಾ ಮಾರಾಟಗಾರರ ಬೆಂಬಲಕ್ಕೆ ನಿಂತ ಬಿಜೆಪಿ ಸರ್ಕಾರ ಕಳ್ಳ ಮಾಲುಗಳನ್ನು ತಡೆಯಲು ವಿಫಲವಾಗಿದೆ. ಇಂಡೋನೇಷ್ಯಾದ ಕಳಪೆ ಗುಣಮಟ್ಟದ ಅಡಕೆಗಳು ಶ್ರೀಲಂಕಾದಿಂದ ಭಾರತಕ್ಕೆ ಲಗ್ಗೆ ಇಡುತ್ತಿವೆ ಎಂದರು.

ಕರ್ನಾಟಕ ರಾಜ್ಯದ 23 ಜಿಲ್ಲೆಯಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಆ ಪೈಕಿ 10 ಜಿಲ್ಲೆಗಳು ಅಡಕೆ ಅವಲಂಬಿತ ಜಿಲ್ಲೆಗಳಾಗಿವೆ. ಅಡಕೆ ಕಾರ್ಯಪಡೆಯ ಅಧ್ಯಕ್ಷ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭೂತಾನ್‌ನಿಂದ ಭಾರತಕ್ಕೆ ಬರುರುವ ಅಡಕೆಯಿಂದ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದರು. ಆದರೆ, ಈಗ ಪ್ರತಿ ಕ್ವಿಂಟಾಲ್‌ಗೆ 20 ಸಾವಿರ ರೂಪಾಯಿ ಕಡಿಮೆ ಆಗಿದೆ. ಇದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Tiger Attack | ಮೈಸೂರಿನಲ್ಲಿ ರೈತನ ಮೇಲೆ ಹುಲಿ ದಾಳಿ, ತೀವ್ರ ಗಾಯ; ಹೆಚ್ಚಿದ ಆತಂಕ

Exit mobile version