ಶಿವಮೊಗ್ಗ: ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು 2023ರ ಜನವರಿ 7, 8 ಮತ್ತು 9ರಂದು ಶಿವಮೊಗ್ಗದ (Shimoga News) ಕುವೆಂಪು ರಂಗ ಮಂದಿರದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪ್ರತಿಭಾ ಕಾರಂಜಿಯ ಲಾಂಛನ ಹಾಗೂ ಜಾಲತಾಣವನ್ನು ಸೋಮವಾರ (ಡಿ.೧೨) ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ, ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆ, ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಉತ್ತಮ ವೇದಿಕೆ ಇದಾಗಿರಲಿದೆ ಎಂದರು.
ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ನಡೆಸಲಾದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಸ್ಥಾನ ಪಡೆದ 1375ಕ್ಕೂ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ರೀತಿಯ 23 ವೈಯಕ್ತಿಕ ವಿಭಾಗಗಳಲ್ಲಿ ಹಾಗೂ 3 ಸಾಮೂಹಿಕ ವಿಭಾಗದಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಾ ಕಾರಂಜಿಯ ಉದ್ಘಾಟನಾ ಕಾರ್ಯಕ್ರಮವು ಜ.7ರಂದು ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಉಳಿದಂತೆ ಪ್ರತಿಭಾ ಕಾರಂಜಿಯ ಏಕರೀತಿಯ ಸಾಂಸ್ಕೃತಿಕ ಸ್ಪರ್ಧೆಗಳು ಡಿ.ವಿ.ಎಸ್. ಕಾಲೇಜಿನ ವಿವಿಧ ಕೊಠಡಿಗಳಲ್ಲಿ ನಡೆಯಲಿವೆ ಎಂದರು.
ಇದನ್ನೂ ಓದಿ | Kantara Movie | ಕಾಂತಾರವನ್ನು ಕೊಂಡಾಡಿದ ಬಾಲಿವುಡ್ ನಟ ಹೃತಿಕ್ ರೋಷನ್!
ಸ್ಪರ್ಧೆಗಳಿಗೆ ತಜ್ಞ ಹಾಗೂ ಪರಿಣಿತಿ ಹೊಂದಿರುವ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ 150ಕ್ಕೂ ಹೆಚ್ಚಿನ ತೀರ್ಪುಗಾರರನ್ನು ನಿಯೋಜಿಸಲಾಗಿದೆ. ಅದರ ಯಶಸ್ಸಿಗಾಗಿ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ವಿವಿಧ 19 ಸಮಿತಿಗಳನ್ನು ರಚಿಸಲಾಗಿದ್ದು, ಅದರ ಮೇಲ್ವಿಚಾರಣೆಗಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ ಸ್ಥಾನ 6,000 ರೂ., ದ್ವಿತೀಯ ಸ್ಥಾನ 4,000 ರೂ. ಹಾಗೂ ತೃತೀಯ ಸ್ಥಾನ 2,000 ರೂ. ನಗದು ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಆಗಮಿಸಿದ ಕ್ರೀಡಾಪಟುಗಳಿಗೆ ಉತ್ತಮ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ನಗರದಲ್ಲಿ ಸುಮಾರು 13 ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.
ಶಿಷ್ಟಾಚಾರದಂತೆ ಈ ಕಾರ್ಯಕ್ರಮದ ಉದ್ಘಾಟನೆಗೆ ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಪ್ರಕಾಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ಲೋಕೇಶ್ವರಪ್ಪ, ರಾಮಪ್ಪಗೌಡ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | Actress Ramya | ರಮ್ಯಾ ಹುಟ್ಟು ಹಬ್ಬಕ್ಕೆ ಸ್ಟಾರ್‌ಗಳ ದಂಡು: ವೈರಲ್ ಆಯ್ತು ಫೋಟೊ!