Site icon Vistara News

Shimoga News | ಜಿಲ್ಲಾ ಬ್ರಾಹ್ಮಣ ಸಭಾದಿಂದ ಸದಸ್ಯತ್ವ ವಜಾ: ಕೇಶ ಮುಂಡನ ಮಾಡಿ ಪ್ರತಿಭಟನೆ

Vipra Samaj protest kesha mundana

ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆಂದು ಆಪಾದಿಸಿ ವಿಪ್ರ ಸಮಾಜದ ಮುಖಂಡರೊಬ್ಬರು ಶುಕ್ರವಾರ (ಡಿ.೨೩) ಕೇಶ ಮುಂಡನ ಮಾಡಿಸಿಕೊಂಡು ವಿನೂತನವಾಗಿ ಪ್ರತಿಭಟಿಸಿದ್ದಾರೆ. ನಗರದ (Shimoga News) ಬಿ.ಹೆಚ್. ರಸ್ತೆಯ ಶ್ರೀಮಾತಾ ಮಾಂಗಲ್ಯ ಮಂದಿರದ ಮುಂಭಾಗದಲ್ಲಿಯೇ, ಕೇಶಮುಂಡನ ಮಾಡಿಸಿಕೊಂಡು, ಪ್ರತಿಭಟನೆ ನಡೆಸಿದರು.

ವಿನೂತನವಾಗಿ ಪ್ರತಿಭಟನೆ ನಡೆಸಿದ ಮಾ.ಸ. ನಂಜುಂಡಸ್ವಾಮಿ ಮಾತನಾಡಿ, ಬ್ರಾಹ್ಮಣ ಮಹಾಸಭಾವು ಶತಮಾನಗಳಿಂದ ಹಿಂದಿನ ಹಿರಿಯರ ಶ್ರಮ, ಹೋರಾಟ ಹಾಗೂ ತ್ಯಾಗಗಳ ಪ್ರತೀಕವಾಗಿ ಬೆಳೆದುಬಂದ ಸಂಸ್ಥೆಯಾಗಿದ್ದು, ಸಮಾಜದ ಏಳಿಗೆಗಾಗಿ ಹೊಸ ಯೋಜನೆಗಳಾಗಲಿ, ಯೋಚನೆಗಳಾಗಲಿ ಕೇವಲ ಅಧಿಕಾರ ಅನುಭವಿಸುವ ಸುಪ್ಪತ್ತಿಗೆಯನ್ನಾಗಿ ಈಗಿನ ಅಧ್ಯಕ್ಷರು ಪರಿವರ್ತಿಸಿಕೊಂಡಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷರ ದುರಹಂಕಾರ ಧೋರಣೆ ತೋರುತ್ತಿದ್ದಾರೆಂದು ಆರೋಪಿಸಿದ್ದಾರೆ.


ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಹಾಗೂ ಹಾಸ್ಟೆಲ್ ಮತ್ತು ಊಟೋಪಚಾರಗಳ ಅವ್ಯವಸ್ಥೆಗಳ ಬಗ್ಗೆ ದೂರಿದಾಗ ವಿಡಿಯೋ ಸಮೇತ ಅಧ್ಯಕ್ಷರ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳುವ ಬದಲು ವಿದ್ಯಾರ್ಥಿಯನ್ನು ಕರೆಸಿ ಹೆದರಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳು ಕೊಟ್ಟ ದೂರಿನ ಅರ್ಜಿ ಪ್ರತಿಗಳು ನನ್ನ ಬಳಿ ಇವೆ. ಈ ವಿಷಯ ತಿಳಿಸಿದ್ದೇ ತಪ್ಪು ಎಂದು ನನ್ನ ಮೇಲೆ ಪೂರ್ವಾಗ್ರಹ ಪೀಡಿತರಾಗಿ ನನ್ನ ಸದಸ್ಯತ್ವವನ್ನೇ ವಜಾ ಮಾಡಿರುತ್ತಾರೆ. ಕಳೆದ 40 ವರ್ಷಗಳಿಂದ ಬ್ರಾಹ್ಮಣ ಮಹಾಸಭಾದ ವಿವಿಧ ಚಟುವಟಿಕೆಗಳ ನೇತೃತ್ವವಹಿಸಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ ನನ್ನನ್ನು ವಜಾ ಮಾಡಿದ್ದರಿಂದ ಈ ಬಗ್ಗೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ಮನವಿ ಸಲ್ಲಿಸಿದ ಮೇರೆಗೆ ಅವರು ವಜಾ ಆದೇಶ ಸರಿಯಲ್ಲ ಎಂದು ಹೇಳಿದ ನಂತರವೂ ಏನು ಕ್ರಮಕೈಗೊಳ್ಳದೆ ದುರಹಂಕಾರಿ ವರ್ತನೆ ತೋರಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದಕ್ಕಾಗಿ ಸಾಂಕೇತಿಕವಾಗಿ ಕೇಶಮುಂಡನ ನಡೆಸಿ ಬ್ರಾಹ್ಮಣ ಮಹಾಸಭಾದ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಅವರು ತಮ್ಮ ಸರ್ವಾಧಿಕಾರಿ ಧೋರಣೆಯನ್ನು ತಿದ್ದುಕೊಂಡು ಸದಸ್ಯತ್ವ ನೀಡದೆ ಇದ್ದಲ್ಲಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

ಇದನ್ನೂ ಓದಿ | Rashmika Mandanna | ಸಹ ನಟರೊಂದಿಗೆ ಆತ್ಮೀಯತೆಯಿಂದಿರಲು ಬಯಸುತ್ತೇನೆ ಎಂದ ರಶ್ಮಿಕಾ ಮಂದಣ್ಣ

Exit mobile version