ಶಿರಾ: ನಗರದ ಸಂತೆಪೇಟೆಯ ಗೋದಾಮುವೊಂದರ ಮೇಲೆ ಶಿರಾ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ನಿಷೇಧಿತ ಪ್ಲಾಸ್ಟಿಕ್ (Banned Plastic) ಅನ್ನು ವಶಪಡಿಸಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ (Shira News) ಜರುಗಿದೆ.
ಗೋದಾಮುವೊಂದರಲ್ಲಿ ನಿಷೇಧಿತ ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ನಗರಸಭೆ ಆಯುಕ್ತ ರುದ್ರೇಶ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ, ಸುಮಾರು 100 ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Cow Smuggling : ಕಂಟೇನರ್, ಮಿಲ್ಕ್ ವ್ಯಾನ್‌ನಲ್ಲಿತ್ತು 70ಕ್ಕೂ ಹೆಚ್ಚು ಜಾನುವಾರು; ಹಿಂಸೆ ಕೊಟ್ಟವರು ಅರೆಸ್ಟ್
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ರುದ್ರೇಶ್ ಮಾತನಾಡಿ, ಪಟ್ಟಣ, ನಗರ ವ್ಯಾಪ್ತಿಗೆ ಬರುವ ಎಲ್ಲ ಅಂಗಡಿ-ಮುಂಗಟ್ಟು ವ್ಯಾಪಾರಿಗಳಿಗೆ, ಹೋಟೆಲ್ ಮಾಲೀಕರಿಗೆ, ರಸ್ತೆ ಬದಿ ವ್ಯಾಪಾರಿಗಳು ಸೇರಿದಂತೆ ಜವಳಿ ಅಂಗಡಿ ಮಾಲೀಕರಿಗೂ ಕೂಡಾ ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಸದಂತೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.
ಈಗಾಗಲೇ ನಗರಸಭೆ ವತಿಯಿಂದ ಹಲವಾರು ಬಾರಿ ಪಟ್ಟಣದ ವ್ಯಾಪಾರಿಗಳಿಗೆ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡದಂತೆ ಎಚ್ಚರಿಕೆ ನೀಡುವುದರ ಜತೆಗೆ ದ್ವನಿವರ್ಧಕಗಳಲ್ಲಿ ಕೂಡ ಪ್ರಚಾರ ಮಾಡಲಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ವ್ಯಾಪಾರಿಗಳಿಗೆ ಕಾನೂನು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಯಾರೇ ಆದರೂ ಅಕ್ರಮವಾಗಿ ನಿಷೇಧಿತ ಪ್ಲಾಸ್ಟಿಕ್ ಅನ್ನು ಮಾರಾಟ ಮಾಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಜತೆಗೆ ಅವರ ಅಂಗಡಿ ಪರವಾನಿಗೆಯನ್ನು ರದ್ದುಗೊಳಿಸಲಾಗವುದು ಮತ್ತು ಅವರಿಗೆ ನ್ಯಾಯಾಲಯದ ಮುಖಾಂತರ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Gautam Gambhir: ಗೌತಮ್ ಗಂಭೀರ್ ಭಾರತದ ಮುಂದಿನ ಕೋಚ್; ಅಧಿಕೃತ ಘೋಷಣೆಯೊಂದೇ ಬಾಕಿ
ಈ ಸಂದರ್ಭದಲ್ಲಿ ನಗರಸಭೆ ಪರಿಸರ ಎಂಜಿನಿಯರ್ ಪಲ್ಲವಿ, ಸಿಬ್ಬಂದಿ ಉಪಸ್ಥಿತರಿದ್ದರು.