ಶಿರಾ: ತಾಲೂಕಿನ ಕೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಪುರ ಗೊಲ್ಲರಹಟ್ಟಿಯಲ್ಲಿ ಚರಂಡಿ ಕಾಮಗಾರಿ ವಿಳಂಬ ಹಾಗೂ ಕಾಮಗಾರಿ ಸ್ಥಗಿತಗೊಳಿಸುತ್ತಿದ್ದ ಗುತ್ತಿಗೆದಾರ (Contractor) ಹಾಗೂ ಆಡಳಿತದ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರೆಬರೆ ಚರಂಡಿ ಕಾಮಗಾರಿಯಿಂದಾಗಿ ಚರಂಡಿಯಲ್ಲಿ ನೀರು ಹರಿಯದಂತಾಗಿದೆ. ಇದರಿಂದ ಸೊಳ್ಳೆ, ನೊಣ, ಕ್ರಿಮಿಕೀಟಗಳ ಬಾಧೆ, ದುರ್ನಾತ ಕೂಡ ಸಹಿಸಬೇಕಾಗಿದೆ. ಚರಂಡಿ ಮಧ್ಯದಲ್ಲಿ ಕುಡಿಯುವ ನೀರಿನ ಘಟಕದ ಪೈಪ್ ಕೂಡ ಹಾದು ಹೋಗಿದೆ. ಚರಂಡಿ ಸ್ವಚ್ಛತೆಯಿಲ್ಲದೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಚರಂಡಿಯ ಸ್ವಚ್ಛತೆಗೆ ಕೂಡ ಸ್ಥಳೀಯರ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Honey bee attack : ಹೆಜ್ಜೇನು ದಾಳಿ ವೇಳೆ ಬಾವಿಗೆ ಹಾರಿ ಜೀವ ಉಳಿಸಿಕೊಂಡ 79ರ ವೃದ್ಧ; ಕಡಿತಕ್ಕೆ ಇಬ್ಬರು ಗಂಭೀರ
ಚರಂಡಿ ಅಗಲವಿದ್ದು, ಇದರ ಕಾಮಗಾರಿ ಪೂರ್ಣವಾಗದ ಕಾರಣ ಅದನ್ನೇ ದಾಟಿ ಹೋಗುವ ಪರಿಸ್ಥಿತಿ ಇದೆ. ಇದನ್ನು ದಾಟಲು ಹೋಗಿ ಮಕ್ಕಳು, ವೃದ್ಧರು ಬಿದ್ದು ಗಾಯಗೊಂಡಿದ್ದಾರೆ. ಕಳೆದ ಐದು ತಿಂಗಳಿನಿಂದಲೂ ಕಾಮಗಾರಿ ಸ್ಥಗಿತಗೊಂಡಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ತಾಲೂಕು ಮತ್ತು ಗ್ರಾಮ ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಕೂಡಲೇ ಕಾಮಗಾರಿ ಆರಂಭಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಅಲ್ಲಿನ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.