Site icon Vistara News

Shiradi ghat | ಶಿರಾಡಿ ಘಾಟಿ ರಸ್ತೆ ಅವ್ಯವಸ್ಥೆ: ವಾರದಲ್ಲಿ ವಿಶೇಷ ಸಭೆ ಕರೆದು ಪರಿಹಾರ ಎಂದ ಸಿಎಂ ಬೊಮ್ಮಾಯಿ

CM bommai in Mangalore

ಮಂಗಳೂರು: ಶಿರಾಡಿ ಘಾಟ್ (Shiradi ghat) ರಸ್ತೆಗೆ ಶಾಶ್ವತ ಪರಿಹಾರ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೊಂದಿಗೆ ಈ ವಾರದಲ್ಲಿ ವಿಶೇಷ ಸಭೆ ಕರೆದು ಚರ್ಚಿಸಿ ಸಮಗ್ರ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಡಾ. ಕಲ್ಲಡ್ಕ ಪ್ರಭಾಕರ್ ಭಟ್‌ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಕಲ್ಲಡ್ಕದ ಶ್ರೀ ರಾಮ ವಿದ್ಯಾ ಕೇಂದ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಶಿರಾಡಿ ಘಾಟಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಿಪೇರಿ ಮಾಡುವುದಾಗಿ ಹೇಳಿದ್ದರು. ಆದರೆ ಮಾಡಿಲ್ಲ. ಕೆಲಸಗಳು ಇನ್ನೂ ನಡೆಯುತ್ತಿಲ್ಲ. ಹೀಗಾಗಿ ಈ ಬಗ್ಗೆ ವಾರದೊಳಗೆ ಸಭೆ ನಡೆಸುತ್ತೇನೆ ಎಂದರು.

ಶಿರಾಡಿ ಘಾಟಿ ರಸ್ತೆ ದುರಸ್ತಿ ಮತ್ತು ಸಮಗ್ರ ಪರಿಹಾರಕ್ಕೆ ಮೂರು ಯೋಜನೆಗಳಿವೆ. ಒಂದು ಡಾಂಬರೀಕರಣ, ಎರಡನೆಯದು ವೈಟ್ ಟಾಪಿಂಗ್ ಹಾಗೂ ಮೂರನೆಯದು ಸುರಂಗ ಮಾರ್ಗ. ಯಾವುದು ಎನ್ನುವುದರ ಬಗ್ಗೆ ಸಮಗ್ರವಾಗಿ ಈ ವಾರದಲ್ಲಿ ಚರ್ಚಿಸಿ ಪರಿಹಾರ ಒದಗಿಸಿಕೊಡಲಾಗುವುದು ಎಂದರು.

ಗಡಿ ವಿವಾದ: ಕರ್ನಾಟಕದ ಹಿತರಕ್ಷಣೆಗೆ ಬದ್ಧ
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಮಹಾರಾಷ್ಟ್ರಕ್ಕೆ ರಾಜ್ಯದ ಬಸ್ಸುಗಳು ಓಡಾಡುತ್ತಿವೆ. ಇನ್ನಷ್ಟು ಕ್ರಮ ವಹಿಸಲು ಮಹಾರಾಷ್ಟ್ರ ಸರ್ಕಾರ ಕ್ಕೆ ಸೂಚನೆ ನೀಡಲಾಗಿದೆ. ಡಿ.14 ರಂದು ಕೇಂದ್ರ ಗೃಹ ಸಚಿವರು ಎರಡೂ ರಾಜ್ಯಗಳ ಸಿಎಂಗಳು ಭಾಗವಹಿಸಲಿದ್ದೇವೆ ಎಂದರು. ಸೋಮವಾರದಂದು ಸಂಸದರು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ಕರ್ನಾಟಕದ ಹಿತರಕ್ಷಣೆ ಹಾಗೂ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹಿತರಕ್ಷಣೆಯನ್ನೂ ಮಾಡುತ್ತೇವೆ ಎಂದರು.

ಅವಕಾಶವಿಲ್ಲ: ಚಳಿಗಾಲದ ಅಧಿವೇಶನದಲ್ಲಿ ಎಂ.ಇ. ಎಸ್. ಸಮಾವೇಶ ಮಾಡಲು ಪ್ರತಿ ಬಾರಿ ಪ್ರಯತ್ನಿಸುತ್ತಾರೆ. ಆದರೆ ಅವಕಾಶ ಕೊಟ್ಟಿಲ್ಲ ಎಂದರು.

ಭಯೋತ್ಪಾದನೆ ನಿಗ್ರಹಕ್ಕೆ ನಿರಂತರ ಕ್ರಮ
ರಾಜ್ಯ ದಲ್ಲಿ 15 ಸ್ಲೀಪರ್ ಸೆಲ್ ಗಳ ಮೇಲೆ ದಾಳಿ ಮಾಡಿ ಭಯೋತ್ಪಾದಕರನ್ನು ಸೆರೆಹಿಡಿಯಲಾಗಿದೆ. ನಿರಂತರವಾಗಿ ಮಾಡುವ ಕೆಲಸ ಇದಾಗಿದೆ. ಅವರ ಸಂಪರ್ಕ, ಹಣಕಾಸಿನ ವ್ಯವಸ್ಥೆ ಬಗ್ಗೆ ಕಾಲಕಾಲಕ್ಕೆ ನಿಗಾ ವಹಿಸಿದೆ. ನಮ್ಮ ಸಂಸ್ಥೆ ಗಳು ಹಾಗೂ ಎನ್.ಐ.ಎ ಒಟ್ಟಿಗೆ ಕೆಲಸ ಮಾಡುತ್ತಿದೆ ಎಂದರು.

ಇದನ್ನೂ ಓದಿ | Border dispute | ಅಮಿತ್‌ ಶಾಗೆ ವಿವರ ನೀಡಿದ ಬೊಮ್ಮಾಯಿ, ಸೋಮವಾರ ರಾಜ್ಯದ ಸಂಸದರಿಂದ ಶಾ ಭೇಟಿ

Exit mobile version