ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ನೀಡುವ ʼಕುವೆಂಪು ರಾಷ್ಟ್ರೀಯ ಪುರಸ್ಕಾರ-2023ʼ ಕ್ಕೆ ಬಂಗಾಳಿ ಭಾಷೆಯ ಸುಪ್ರಸಿದ್ಧ ಬರಹಗಾರರಾದ ಶೀರ್ಷೇಂಧು ಮುಖ್ಯೋಪಾಧ್ಯಾಯ (Shirshendu Mukhopadhyay) ಆಯ್ಕೆ ಆಗಿದ್ದಾರೆ. ನವೆಂಬರ್ 17ರಂದು ಬೆಂಗಳೂರಿನಲ್ಲಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿ ಸಭೆಯಲ್ಲಿ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಪ್ರತಿಷ್ಠಾನದ ಸಹಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸಂಚಾಲಕರಾಗಿದ್ದ ಆಯ್ಕೆ ಸಮಿತಿಯಲ್ಲಿ ನಿರ್ಮಲ್ ಕಾಂತಿ ಭಟ್ಟಾಚಾರ್ಯ, ಗೀತಾ ವಿಜಯಕುಮಾರ್ ಹಾಗೂ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿಗಳಾದ ಅಗ್ರಹಾರ ಕೃಷ್ಣಮೂರ್ತಿಯವರು ತೀರ್ಪುಗಾರರಾಗಿದ್ದರು.
ಬಂಗಾಳಿ ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ ಮಹತ್ವದ ಕೃತಿಗಳ ಮೂಲಕ ಹೆಚ್ಚಿಸಿದ, ವರ್ತಮಾನದ ಬಹು ಮಹತ್ವದ ಮತ್ತು ಜನಪ್ರಿಯ ಲೇಖಕರಾದ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರನ್ನು 2023ರ “ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ | Raja Marga Column: ಇವರು ಡಾ. ಪ್ರದೀಪ್ ಕುಮಾರ್ ಹೆಬ್ರಿ; 511 ಪುಸ್ತಕ, 19 ಮಹಾಕಾವ್ಯ!
ಜನಪ್ರಿಯ ಬರಹಗಾರರಾಗಿರುವ ಶೀರ್ಷೇಂಧು ಅವರು ತಮ್ಮ ಹೊಸತನದ ಬರವಣಿಗೆಗಳಿಂದ ಬಂಗಾಳಿ ಭಾಷಾ ಸಾಹಿತ್ಯವನ್ನೂ, ತನ್ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಥೆ, ಕಾದಂಬರಿ, ಪ್ರವಾಸಕಥನ. ಮಕ್ಕಳ ಪುಸ್ತಕಗಳು ಸೇರಿ ಸುಮಾರು 90 ಕೃತಿಗಳು ಇದುವರೆಗೆ ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನವೂ ಸೇರಿದಂತೆ ಹಲವಾರು ಪುರಸ್ಕಾರಗಳು ಶೀರ್ಷೇಂಧು ಅವರಿಗೆ ದೊರೆತಿವೆ.
ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನವಾದ ಡಿಸೆಂಬರ್ 29ರಂದು ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ’ವನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಐದು ಲಕ್ಷ ರೂಪಾಯಿ ಮತ್ತು ಬೆಳ್ಳಿ ಪದಕಗಳನ್ನು ಒಳಗೊಂಡಿರುತ್ತದೆ.
ಶೀರ್ಷೇಂಧು ಮುಖ್ಯೋಪಾಧ್ಯಾಯ ಪರಿಚಯ
ಬಂಗಾಳಿ ಭಾಷೆಯ ಮಹತ್ವದ ಕಥೆಗಾರರಾದ ಶೀರ್ಷೇಂದು ಮುಖ್ಯೋಪಾಧ್ಯಾಯ ಅವರು, ಬ್ರಿಟಿಷ್ ಇಂಡಿಯಾದ (ಪ್ರಸ್ತುತ ಬಾಂಗ್ಲಾದೇಶದ) ಮೈಮೆನ್ಸಿಂಗ್ ಎಂಬಲ್ಲಿ 1935ರ ನವೆಂಬರ್ 9ರಂದು ಜನಿಸಿದರು. ಭಾರತ ವಿಭಜನೆಯ ಸಂದರ್ಭದಲ್ಲಿ ಅವರ ಕುಟುಂಬ ಕೋಲ್ಕತ್ತಾಗೆ ವಲಸೆ ಬಂದಿತ್ತು. ಆಗ ಶೀರ್ಷೇಂಧು 2 ವರ್ಷದ ಬಾಲಕ. ಅವರ ತಂದೆ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರಿಂದ, ಶೀರ್ಷೇಂಧು ಅವರ ಬಾಲ್ಯ ಮತ್ತು ಪ್ರಾರಂಭದ ಶಿಕ್ಷಣ ಅವಿಭಜಿತ ಬಂಗಾಳ, ಅಸ್ಸಾಂ ಮತ್ತು ಬಿಹಾರದಲ್ಲಿ ಕಳೆಯಿತು. ಕೂಚ್‌ಬಿಹಾರ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ ಇಂಟರ್‌ಮಿಡಿಯೇಟ್ ಪಾಸಾದ ಅವರು, ಕೋಲ್ಕೊತಾ ವಿಶ್ವವಿದ್ಯಾಲಯದಿಂದ ಬಂಗಾಳಿ ಭಾಷೆಯಲ್ಲಿ ಸ್ನಾತಕ ಪದವಿ ಪಡೆದರು.
ಶಾಲಾಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಶೀರ್ಷೇಂಧು ಅವರು, ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. ‘ದೇಶ್’ ಎಂಬ ಬಂಗಾಳಿ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಈಗಲೂ ಆನಂದ ಬಜಾರ್ ಪತ್ರಿಕೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. 1959ರಲ್ಲಿ ಶೀರ್ಷೇಂಧು ಅವರ ಮೊದಲ ಕಥೆ ‘ದೇಶ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅವರ ಮೊದಲ ಕಾದಂಬರಿ ಘುನ್ಫೋಕ (Ghunpoka) 1967ರಲ್ಲಿ ದೇಶ್ ಪತ್ರಿಕೆಯ ‘ಪೂಜಾ’ ವಾರ್ಷಿಕ ಸಂಪುಟದಲ್ಲಿ ಪ್ರಕಟವಾಗಿತ್ತು. ಮೊದಲ ಮಕ್ಕಳ ಪುಸ್ತಕ ಮನೋಜ್‌ದೇರ್ ಅದ್ಭುತ್ ಬಾರಿ (Manojader Adbhut Bari) 1978ರಲ್ಲಿ ಪ್ರಕಟವಾಯಿತು. ಬರಹಗಾರರಾಗಿ ಜನಪ್ರಿಯರಾಗಿರುವ ಶೀರ್ಷೇಂಧು ಅವರು, ಇಲ್ಲಿಯವರೆಗೆ 90ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 50 ಕೃತಿಗಳು ಮಕ್ಕಳಿಗಾಗಿ ಬರೆದ ಪುಸ್ತಕಗಳೇ ಆಗಿರುವುದು ವಿಶೇಷ.
ಇವರ ಹಲವಾರು ಕತೆಗಳು, ಮಕ್ಕಳಿಗಾಗಿ ಕಾಮಿಕ್ ರೂಪದಲ್ಲಿ ಪ್ರಕಟವಾಗಿವೆ. ಜೊತೆಗೆ, ಹೊಸತಲೆಮಾರಿನ ಓದುಗರಿಗೆ ಸುಲಭವಾಗಿ ಲಭ್ಯವಾಗುವಂತೆ ಇವರ ಹಲವಾರು ಕತೆ ಕಾದಂಬರಿಗಳು ಈ ಪುಸ್ತಕಗಳಾಗಿಯೂ ಆನ್‌ಲೈನ್‌ನಲ್ಲಿ ಲಭ್ಯವಿವೆ. ಆದ್ದರಿಂದ ಬಂಗಾಳಿಯಲ್ಲಿ ಶೀರ್ಷೇಂದು ಅವರು ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಚಿರಪರಿಚಿತರಾಗಿರುವ ಅತ್ಯಂತ ಜನಪ್ರಿಯ ಲೇಖಕ ಎನ್ನಬಹುದು.
ಪಾರ್ತಿಬೊ (Parthibo), ನಯನ್ ಶ್ಯಾಮ್ (Nayan Shyama), ಪರಪರ್ (Parapar), ದುರ್ಬೀನ್ (Durbin), ಏಕಾದಶಿ ಓ ಭೂತ್ (Ekadashi O Bhoot) ಮೊದಲಾದ ಕೃತಿಗಳು ಅವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟಿವೆ. ಭ್ರಮಣ್ ಸಮಗ್ರ (BHRAMAN SAMAGRA) ಅವರ ಪ್ರವಾಸ ಕಥನ, ಬಂಗಾಳಿಯಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಕೃತಿಯೂ ಹೌದು.
ಇವರ ಕತೆಗಳ ಗಟ್ಟಿತನದಿಂದಾಗಿ, ಸಿನಿಮಾ ಕ್ಷೇತ್ರದ ಸಂಪರ್ಕವೂ ಅನಾಯಾಸವಾಗಿ ದೊರೆತಿರುತ್ತದೆ. 1992ರಲ್ಲಿ ರಿತುಪರ್ಣೋ ಅವರ ನಿರ್ದೇಶನದಲ್ಲಿ ತಯಾರಾಗಿ ಬಿಡುಗಡೆಯಾದ, ಶೀರ್ಷೇಂಧು ಅವರ ಹೈರೇರ್ ಅಂಗ್ತಿ (Hirer Angti ) ಕಥೆಯಾಧಾರಿತ, ಅದೇ ಹೆಸರಿನ ಸಿನಿಮಾದಿಂದ ಪ್ರಾರಂಭಿಸಿ, ಇದುವರೆಗೆ 17 ಸಿನಿಮಾಗಳು ಇವರ ಕಥೆ-ಕಾದಂಬರಿಯನ್ನು ಆಧರಿಸಿ ಬಂದಿವೆ. ಬಹುತೇಕ ಬಂಗಾಳಿಯ ಎಲ್ಲ ಪ್ರಮುಖ ಸಿನಿಮಾ ನಿರ್ದೇಶಕರೂ ಇವರ ಕಥೆ ಕಾದಂಬರಿಗಳನ್ನು ಆಧರಿಸಿ ಸಿನಿಮಾ ಮಾಡಿರುವುದು ವಿಶೇಷ.
ಇದನ್ನೂ ಓದಿ | Mallepuram G Venkatesh: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಆತ್ಮಕಥನ ʼದಿಟದ ದೀವಟಿಗೆʼ ಲೋಕಾರ್ಪಣೆ
ಜನಪ್ರಿಯ ಕತೆಗಾರರಾಗಿರುವ ಶೀರ್ಷೇಂಧು ಅವರನ್ನು ಸಹಜವಾಗಿ ಹಲವಾರು ಸಾಹಿತ್ಯ ಪುರಸ್ಕಾರಗಳೂ ಹುಡುಕಿಕೊಂಡು ಬಂದಿವೆ. ಮುಖ್ಯವಾಗಿ, ಮಕ್ಕಳ ಸಾಹಿತ್ಯಕ್ಕಾಗಿ ವಿದ್ಯಾಸಾಗರ ಪುರಸ್ಕಾರ (1985), ಎರಡು ಬಾರಿ ಆನಂದ ಪುರಸ್ಕಾರ (1973 ಮತ್ತು 1990), ಮನಬ್ಜಮಿನ್ (Manahjamin) ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿ ಬಹುಮಾನ (19689), ಬಂಗಬಿಭೂಷಣ್ ಪ್ರಶಸ್ತಿ (2012), ಎ.ಬಿ.ಪಿ. ಆನಂದ ಸೆರ ಬಂಗಾಳಿ ಪ್ರಶಸ್ತಿ ಮೊದಲಾದವು ಸೇರಿವೆ. ಇದಲ್ಲದೆ. 2021ರಲ್ಲಿ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಕೂಡಾ ದೊರೆತಿರುತ್ತದೆ. ಅಶೋಕ್ ವಿಶ್ವನಾಥನ್ ಎಂಬುವವರು, ಸಾಹಿತ್ಯ ಅಕಾಡೆಮಿಗಾಗಿ ಶೀರ್ಷೇಂದು ಮುಖ್ಯೋಪಾಧ್ಯಾಯ್ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ.