ಬಾಗಲಕೋಟೆ: ಶಿವಾಜಿ ಮೂರ್ತಿ (Shivaji statue) ಮರು ಪ್ರತಿಷ್ಠಾಪನೆಗೆ ಆಗ್ರಹಿಸಿ ಶನಿವಾರ (ಆ.19) ಬಾಗಲಕೋಟೆ ನಗರ ಬಂದ್‌ಗೆ ಕರೆ ನೀಡಲಾಗಿದೆ. ಜಿಲ್ಲಾ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳು ಶಿವಾಜಿ ಮೂರ್ತಿ ತೆರವು ಖಂಡಿಸಿ ಬಂದ್‌ಗೆ ಕರೆ ನೀಡಿವೆ.
ನಗರದ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಬಂದ್ ಹಿನ್ನೆಲೆ ಅಡತ ಮಾರ್ಕೆಟ್ ಬಜಾರ್ ಬಿಕೋ ಎನ್ನುತ್ತಿದೆ. ಆದರೆ ಎಂದಿನಂತೆ ಖಾಸಗಿ ವಾಹನಗಳ ಓಡಾಟ ಇದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲೆಲ್ಲೂ ಪೊಲೀಸರ ಭದ್ರತೆ ನೀಡಲಾಗಿದೆ.
ಮೌನ ಪ್ರತಿಭಟನಾ ಮೆರವಣಿಗೆ
ಹಿಂದು ಪರ ಸಂಘಟನೆಗಳಿಂದ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಬಳಿಕ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠ ಭಾಗಿಯಾಗಲಿದ್ದಾರೆ. ಇದಾದ ನಂತರ ಜಿಲ್ಲಾ ಕೇಂದ್ರಕ್ಕೆ ತೆರಳಿ ಡಿಸಿಗೆ ಮನವಿ ಹಾಗೂ ಜಿಲ್ಲೆಯ 9 ತಾಲೂಕು ಕೇಂದ್ರಗಳಲ್ಲೂ ತಹಸೀಲ್ದಾರಗೆ ಮನವಿ ಪತ್ರ ನೀಡಲಿದ್ದಾರೆ.
ಇದನ್ನೂ ಓದಿ: Weather Report : ರಾಜ್ಯದಲ್ಲಿ ಮಳೆ ನೀರಸ ಪ್ರದರ್ಶನ; ಕೆಲವು ಜಿಲ್ಲೆಯಲ್ಲಿ ವರುಣ ಬರೋದು ಡೌಟು!
ಏನಿದು ಘಟನೆ?
ನಗರದ ಸೋನಾರ್ ಬಡಾವಣೆಯಲ್ಲಿ ಕೆಲವು ದಿನಗಳ ಹಿಂದೆ ಅನಧಿಕೃತವಾಗಿ ಮೂರ್ತಿಯನ್ನು ಕೆಲವರು ಪ್ರತಿಷ್ಠಾಪನೆ ಮಾಡಿದ್ದರು. ಆದರೆ ಅನಧಿಕೃತವಾಗಿ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಜಿಲ್ಲಾಡಳಿತ ಮೂರ್ತಿ ತೆರವಿಗೆ ಮುಂದಾದಾಗ ಹಿಂದುಪರ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಷ್ಠಾಪನೆ ಮಾಡಿದ್ದ ಶಿವಾಜಿ ಮೂರ್ತಿಯನ್ನು (Shivaji Statue) ಬಿಗಿ ಪೊಲೀಸ್ ಭದ್ರತೆಯ ನಡುವೆ ಜಿಲ್ಲಾಡಳಿತ ಬುಧವಾರ ರಾತ್ರಿ (ಆ.16) ತೆರವುಗೊಳಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಹಿಂದುಪರ ಸಂಘಟನೆ, ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿ ಶಿವಾಜಿ ಮೂರ್ತಿ ತೆರವು ಮಾಡಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಜೆಸಿಬಿ ಮೂಲಕ ಶಿವಾಜಿಮೂರ್ತಿ ತೆರವು ಮಾಡಿದ ಪೊಲೀಸರು, ಟಾಟಾ ಏಸ್ ವಾಹನದಲ್ಲಿ ಪ್ರತಿಮೆಯನ್ನು ರವಾನೆ ಮಾಡಿ ನಗರಸಭೆ ಸಿಬ್ಬಂದಿ ಸುಪರ್ದಿಗೆ ನೀಡಿದ್ದರು. ಇನ್ನು ಪ್ರತಿಮೆ ತೆರವು ವಿರೋಧಿಸಿ ಗುರುವಾರ ಈ ಸಂಬಂಧ ಹಿಂದುಪರ ಸಂಘಟನೆಗಳು ಸಭೆ ಕರೆದಿದ್ದರು. ಶನಿವಾರ ಸ್ವಯಂಘೋಷಿತ ಬಂದ್‌ಗೆ ಕರೆ ನೀಡಿದ್ದರು.
ಅನಧಿಕೃತ ಶಿವಾಜಿ ಮೂರ್ತಿ ತೆರವು ಹಿನ್ನೆಲೆಯಲ್ಲಿ ಆಗಸ್ಟ್ 18ರ ಮಧ್ಯರಾತ್ರಿ 12 ಗಂಟೆವರೆಗೆ ಜಿಲ್ಲಾಡಳಿತ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಳೇ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ.ಕೆ.ಎಮ್.ಆದೇಶ ಹೊರಡಿಸಿದ್ದರು. ಪ್ರತಿಭಟನೆ, ಗುಂಪು ಸೇರಿದರೆ ಪೊಲೀಸರು ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ