ತುಮಕೂರು: ಇಂದು ನಾವು ೨೧ನೇ ಶತಮಾನದಲ್ಲಿದ್ದೇವೆ. ನಾಡಿನಲ್ಲಿ ದಲಿತರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡಗಳು ಸೇರಿದಂತೆ ಎಲ್ಲ ತುಳಿತಕ್ಕೊಳಗಾದ ಸಮುದಾಯದವರನ್ನು ಮೇಲೆತ್ತುವ ಕೆಲಸ ನಮ್ಮಿಂದಾಗಬೇಕು. ಸಮಾಜದ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗಬೇಕಾದ ಮಹತ್ತರ ಜವಾಬ್ದಾರಿ ಇಲ್ಲಿರುವ ನಮ್ಮೆಲ್ಲರ ಮೇಲಿದೆ. ದೇವಸ್ಥಾನಕ್ಕೆ ಹೋಗಿ ದಾನವನ್ನು ಮಾಡುತ್ತೇವೆ. ಆದರೆ, ಮನುಷ್ಯನಲ್ಲಿ ದೇವರನ್ನು ಕಾಣುವ ಕೆಲಸ ನಿಜವಾದ ಧರ್ಮವಾಗಿದೆ. ಈ ಕೆಲಸವನ್ನು ಶಿವಕುಮಾರ ಮಹಾಸ್ವಾಮೀಜಿಯವರು ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಹೇಳಿದರು.
ಸಿದ್ಧಗಂಗಾ ಮಠದಲ್ಲಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ೪ನೇ ಪುಣ್ಯಸಂಸ್ಮರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಹಸಿವಿನಿಂದ ಬಂದವರಿಗೆ ಅನ್ನದಾಸೋಹಿಯಾಗಿ, ಜ್ಞಾನವನ್ನು ಅರಸಿ ಬಂದವರಿಗೆ ಅರಿವಿನ ದಾಸೋಹಿಯಾಗಿ, ಅನಾಥರಾಗಿ ಬಂದವರಿಗೆ ಆಶ್ರಯ ದಾಸೋಹಿಗಳಾಗಿ ಡಾ. ಶಿವಕುಮಾರ ಮಹಾಸ್ವಾಮೀಜಿಯವರು ಶಕ್ತಿಯಾಗಿ ನಿಂತಿದ್ದರು. ಮಣ್ಣಿನಲ್ಲಿ, ಕಲ್ಲಿನಲ್ಲಿ, ಜ್ಯೋತಿಯಲ್ಲಿ ದೇವರನ್ನು ಕಾಣುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಆದರೆ, ನಾವು ನಮ್ಮ ಜೀವನದಲ್ಲಿ ನಡೆದಾಡುವ ದೇವರನ್ನು ನೋಡುವಂತಹ, ದರ್ಶನವನ್ನು ಮಾಡುವಂತಹ ಹಾಗೂ ಅವರ ಮಾತನ್ನು ಕೇಳುವಂತಹ ಅವಕಾಶ ನಮಗೆ ಒದಗಿ ಬಂದಿರುವುದು ನಮ್ಮ ಪೂರ್ವಜನ್ಮದ ಪುಣ್ಯವಾಗಿದೆ ಎಂದು ಹೇಳಿದರು.
ಬಸವಣ್ಣರ ವಚನ ಹೇಳಿದ ವಿಜಯೇಂದ್ರ
ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು. ಧರ್ಮ ದೊಡ್ಡದಲ್ಲ, ದಯೆಯೇ ದೊಡ್ಡದು ಎಂದು ಬಸವಣ್ಣ ಹೇಳಿದ್ದರು. ಅದೇ ರೀತಿಯಾಗಿ ಉಸಿರು ಇರುವವರೆಗೂ ನಡೆದುಕೊಂಡು ಬಂದವರು ಶಿವಕುಮಾರ ಸ್ವಾಮೀಜಿಯವರಾಗಿದ್ದಾರೆ. ಎನ್ನ ಕಾಲೇ ಕಂಬಗಳು, ದೇಹವೇ ದೇಗುಲ, ಶಿರವೇ ಹೊನ್ನಕಳಸವಯ್ಯ ಎಂಬ ಬಸವಣ್ಣನವರ ವಚನದಂತೆ ನೊಂದವರ, ಬಡವರ, ಅಕ್ಷರ ವಂಚಿತರ ಪಾಲಿಗೆ ಕಲ್ಪವೃಕ್ಷವಾಗಬೇಕೆಂಬ ಸಂಕಲ್ಪವನ್ನು ತೊಟ್ಟು ಪರಿಶ್ರಮದಿಂದ ಈ ಮಠವನ್ನು ಕಟ್ಟಿದರು. ಅಲ್ಲದೆ, ಭಿಕ್ಷಾ ಪಾತ್ರೆ ಹಿಡಿದು ಊರೂರು ಅಲೆದಿದ್ದ ಶಿವಕುಮಾರ ಸ್ವಾಮೀಜಿಯವರು ಇಂದು ಲಕ್ಷಾಂತರ ಮಂದಿಗೆ ಆಸರೆಯಾಗಿ, ಅನ್ನ, ಅಕ್ಷರ, ಜ್ಞಾನ ದಾಸೋಹವನ್ನು ಹಂಚುವ ಮೂಲಕ ಇಡೀ ಜಗತ್ತಿಗೆ ತ್ರಿವಿಧ ದಾಸೋಹದ ಬಗ್ಗೆ ತೋರಿಸಿಕೊಟ್ಟವರಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ | Mangalore Drugs | ಇನ್ನಷ್ಟು ಆಸ್ಪತ್ರೆಗೆ ಹಬ್ಬಿದ ಡ್ರಗ್ಸ್ ಜಾಲ: ಇಬ್ಬರು ವೈದ್ಯರು, 7 ವೈದ್ಯ ವಿದ್ಯಾರ್ಥಿಗಳ ಬಂಧನ
ನನ್ನ ತಂದೆಯವರಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಈ ನಾಡಿನ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಯಾವುದೇ ಸಮಸ್ಯೆ, ಸವಾಲುಗಳು ಬಂದರೂ ಸಹ ಅದನ್ನು ಎದುರಿಸುವ ಪ್ರೇರಣೆ ಹಾಗೂ ಶಕ್ತಿಯನ್ನು ಶಿವಕುಮಾರ ಸ್ವಾಮೀಜಿಯವರು ದಯಪಾಲಿಸಿದ್ದಾರೆ. ಶ್ರೀಗಳ ಹುಟ್ಟೂರಾದ ವೀರಾಪುರದಲ್ಲಿ ೧೧೧ ಅಡಿ ಎತ್ತರದ ಶ್ರೀಗಳ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ೮೫ ಕೋಟಿ ರೂಪಾಯಿ ಅನುದಾನವನ್ನು ಕೊಡುತ್ತೇನೆ ಎಂದು ಯಡಿಯೂರಪ್ಪ ಘೋಷಿಸಿದ್ದರು. ಅದರಲ್ಲಿ ೨೫ ಕೋಟಿ ರೂಪಾಯಿಯನ್ನು ಈಗಾಗಲೇ ಕೊಡಲಾಗಿದೆ. ಅಲ್ಲದೆ, ಕೆಆರ್‌ಐಡಿಎಲ್ ಸಂಸ್ಥೆಯು ಸಿಎಸ್‌ಆರ್ ಅನುದಾನದಡಿ ಆ ಗ್ರಾಮವನ್ನು ಶೇಕಡಾ ೨೫ರಷ್ಟು ಅಭಿವೃದ್ಧಿಪಡಿಸುತ್ತಿದೆ ಎಂದು ವಿಜಯೇಂದ್ರ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬಂದಾಗ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಅಲ್ಲದೆ, ಅವರು ಬಸವಣ್ಣ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಅವರು ನಡೆದು ಬಂದ ದಾರಿಯನ್ನು ಸ್ಮರಿಸುತ್ತಾರೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಸಿದ್ಧಗಂಗ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆ ಮಾಡಬೇಕಿತ್ತು. ಆದರೆ, ಅವರು ವಿಜಯಪುರದಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ಗೈರಾಗಿದ್ದಾರೆ. ಈ ಕಾರಣದಿಂದ ಅವರ ಪರವಾಗಿ ನಾನು ಭಾಗಿಯಾಗಿದ್ದೇನೆ ಎಂದು ವಿಜಯೇಂದ್ರ ತಿಳಿಸಿದರು.
ಇದನ್ನೂ ಓದಿ | Kantara Movie | ಜೂನ್‌ನಲ್ಲಿ ಕಾಂತಾರ-2 ಪ್ರಿಕ್ವೆಲ್ ಚಿತ್ರೀಕರಣ: ಮಾಹಿತಿ ಹಂಚಿಕೊಂಡ ವಿಜಯ್ ಕಿರಗಂದೂರು
ಎಲ್ಲ ಸಮುದಾಯಕ್ಕೂ ಸಮಾನ ಭಾವ: ಸಚಿವ ಸೋಮಣ್ಣ
ಸಿದ್ದಗಂಗಾ ಡಾ. ಶಿವಕುಮಾರ್ ಮಹಾಸ್ವಾಮೀಜಿಯವರು ನಡೆದಾಡುವ ದೇವರಾಗಿದ್ದರು. ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲ ಸಮುದಾಯಕ್ಕೂ ಸಮಾನ ಭಾವ ನೀಡಿರುವುದು ಸಿದ್ದಗಂಗಾ ಮಠವಾಗಿದೆ. ಶ್ರೀಗಳ ಮಾತುಗಳು ಎಲ್ಲ ಲೈಬ್ರರಿಯಲ್ಲಿ ಸಿಗುವಂತಾಗಬೇಕು. ಯಾವೊಬ್ಬ ಮಕ್ಕಳಿಗೂ ಯಾವ ಸಮಾಜದಿಂದ ಬಂದವರು ಎಂದು ಎಂದಿಗೂ ಕೇಳಿಲ್ಲ. ದಿವಂಗತ ಜೆ.ಎಚ್.ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಜನರನ್ನು ನೋಡಿ, ಈ ಸ್ವಾಮೀಜಿಯವರು ಎಲ್ಲಿಯವರು? ಯಾವ ಊರಿನವರು? ಆ ಊರನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಮುಂದಾದರು. ಈ ವಿಚಾರವನ್ನು ಸ್ವಾಮೀಜಿಗಳ ಗಮನಕ್ಕೆ ಬಂದಾಗ, ಅದಕ್ಕೂ ನನಗೂ ಸಂಬಂಧವಿಲ್ಲ, ಅದು ಸರ್ಕಾರಕ್ಕೆ ಬಿಟ್ಟಿದ್ದು. ನನ್ನದು ಸೇವೆಯಷ್ಟೇ ಅಂತ ಹೇಳಿದ್ದರು ಎಂದು ಸಚಿವ ವಿ.ಸೋಮಣ್ಣ ಸ್ಮರಿಸಿದರು.
ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು, ಒಂದು ಬಾರಿ ಮಠಕ್ಕೆ ಬರುವ ಕಾರ್ಯಕ್ರಮವಿತ್ತು. ಸಾಕಷ್ಟು ಬಿಸಿಲು ಇದ್ದಿದ್ದರಿಂದ ವೇದಿಕೆ ಬಳಿ ಧೂಳಿತ್ತು. ಆಗ ಫೈರ್ ಇಂಜಿನ್ ಮೂಲಕ ನೀರು ಹಾಯಿಸಬೇಕು ಅಂತ ನಾವು ಹೇಳಿದ್ವಿ. ಆಗ ಸ್ವಾಮೀಜಿಯವರು ಮಳೆ ಬಂದರೆ ಹೇಗೆ ಅಂತ ಕೇಳಿದ್ದರು. ಅದು ಬೇಸಿಗೆ ಸಂದರ್ಭವಾದರೂ ಅಂದು ರಾತ್ರಿ ಮಳೆ ಬಂತು ಎಂದು ಸ್ವಾಮೀಜಿಗಳ ಪವಾಡಗಳ ಬಗ್ಗೆ ಬಣ್ಣಿಸಿದರು.
ಸನ್ಯಾಸ ಪರಂಪರೆಯಿಂದ ಸಾಮರಸ್ಯದ ಸಂದೇಶ: ಬಿ.ಎಲ್. ಸಂತೋಷ್
ನಮ್ಮ ದೇಶದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೂ ಮೊದಲು ರಾಜ ಪ್ರಭುತ್ವ ಇತ್ತು. ಅದಕ್ಕೂ ಮೊದಲು ನಮ್ಮ ದೇಶವನ್ನು ನಡೆಸಿಕೊಂಡು ಬಂದಿದ್ದು ಸನ್ಯಾಸಿಗಳು. ಈ ದೇಶದಲ್ಲಿ ಶಾಂತಿ, ಸಾಮರಸ್ಯದ ಸಂದೇಶವನ್ನು ಸಾರಿದ್ದು ಸನ್ಯಾಸ ಪರಂಪರೆಯಾಗಿದೆ. ಭೂಮಿಯನ್ನು ಆದಿಶೇಷ ತನ್ನ ಹೆಗಲ ಮೇಲೆ ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ನಮ್ಮ ಸಮಾಜವನ್ನು ಹೆಗಲ ಮೇಲೆ ಹೊತ್ತುಕೊಂಡಿರುವುದು ನಮ್ಮ ಮುಂದಿರುವ ಸನ್ಯಾಸಿಗಳಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಹಣ ಇಲ್ಲದೆ ಅರ್ಧ ಗಂಟೆ ಕಳೆಯಲು ಆಗದು, ಮೊಬೈಲ್ ಇಲ್ಲದೆ ಒಂದು ಕ್ಷಣ ಇರುವುದಕ್ಕಾಗದು ಎಂಬ ಈ ಕಾಲದಲ್ಲಿ ಅದ್ಯಾವುದೂ ಇಲ್ಲದೆ ಜಗತ್ತಿಗೆ ಬೆಳಕು ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿದವರು ಶಿವಕುಮಾರ ಮಹಾಸ್ವಾಮೀಜಿಯವರು. ಅನೇಕ ಸಂಗತಿಗಳನ್ನು ಸಂವಿಧಾನದಲ್ಲಿ ಓದುತ್ತೇವೆ. ಆದರೆ, ಅದೆಲ್ಲವನ್ನೂ ಆಚರಣೆ ಮಾಡಲು ಆಗುವುದಿಲ್ಲ ಎಂಬ ಪರಿಸ್ಥಿತಿ ಇದೆ. ದಂಡವನ್ನು ಮುಂದಿಟ್ಟುಕೊಂಡು ಎಲ್ಲವನ್ನೂ ಆಚರಣೆ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಚೇತನವನ್ನು ಮುಂದಿಟ್ಟುಕೊಂಡರೆ ಎಲ್ಲವೂ ಆಗುತ್ತದೆ ಎಂದು ಸಂತೋಷ್ ಹೇಳಿದರು.
ಖಿನ್ನತೆಗೊಳಗಾಗಿದ್ದ ಸ್ಟಿವ್ ಜಾಬ್ಸ್ ನೆಮ್ಮದಿ ಅರಸಿ ನಮ್ಮ ದೇಶಕ್ಕೆ ಬಂದಿದ್ದರು. ಇಲ್ಲಿನ ಸನ್ಯಾಸಿಗಳ ಒಡನಾಟದಿಂದ ನೆಮ್ಮದಿ ಕಂಡರು. ಬಳಿಕ ತಮ್ಮ ದೇಶಕ್ಕೆ ಹೋಗಿ ಐ ಫೋನ್ ಕಂಡುಹಿಡಿದರು. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಸನ್ಯಾಸಿಯಾಗಲು ಹೊರಟಿದ್ದರು. ಆದರೆ, ರಾಮಕೃಷ್ಣ ಆಶ್ರಮದ ಸ್ವಾಮೀಜಿಯೊಬ್ಬರು ಅವರನ್ನು ಸಾಮಾಜಿಕ ಜೀವನಕ್ಕೆ ಹೋಗಲು ಪ್ರೇರೇಪಿಸಿದ್ದರು.
ಇದನ್ನೂ ಓದಿ | Bengaluru Pothole: ಮುಂದುವರಿದ ಗುಂಡಿ ಗಂಡಾಂತರ; ಇಟ್ಮಡು ಮುಖ್ಯರಸ್ತೆಯಲ್ಲಿ ಕುಸಿದ ರಸ್ತೆ, ಕಂದಕ ನಿರ್ಮಾಣ