Site icon Vistara News

ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ: ಶ್ರೀಗಳ ಬದುಕು ಸೇವೆಯ ಪ್ರತೀಕ, ತ್ಯಾಗಮಯ; ಸಿದ್ದಲಿಂಗ ಸ್ವಾಮೀಜಿ

siddaganga seer ಸಿದ್ದಲಿಂಗ ಶ್ರೀ

ತುಮಕೂರು: ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಬದುಕು ಸೇವೆ, ಕಾಯಕ, ದಾಸೋಹ, ಶಿವಯೋಗ ತಪಸ್ಸು ಎಲ್ಲರಿಗೂ ತಿಳಿದಿದೆ. ಸೇವೆಯಲ್ಲಿ ಅವರು ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡಿದ್ದವರು. ಪರಮಪೂಜ್ಯರ ಇಡೀ ಸೇವೆಯ ಪ್ರತೀಕ ಹಾಗೂ ತ್ಯಾಗಮಯವಾಗಿತ್ತು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಲಿಂಗೈಕ್ಯರಾಗಿ 4 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೋಮವಾರ ಮಹಾ ಶಿವಯೋಗಿಗಳ 4ನೇ ವರ್ಷದ ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಅವರು ಎಂದೂ ಹಾಲು ಸೇವಿಸುತ್ತಿರಲಿಲ್ಲ. ಅವರಿಗೆ ಅನಾರೋಗ್ಯವಿದ್ದಾಗ ಒಂದು ಲೋಟ ಹಾಲು ಕೊಟ್ಟರೆ, ಏನಪ್ಪಾ ನನಗೆ ಒಂದು ಲೋಟ ಹಾಲು ಕೊಟ್ಟಿದ್ದೀಯ? ಇದನ್ನೇ ಹೆಪ್ಪು ಹಾಕಿದ್ದರೆ ನಾಲ್ಕು ಮಕ್ಕಳು ಊಟ ಮಾಡಲು ಮಜ್ಜಿಗೆ ಆಗುತ್ತಿತ್ತು ಎಂದು ಸರಳತೆಯನ್ನು ಮೆರೆಯುತ್ತಿದ್ದರು ಎಂದು ಸಿದ್ದಲಿಂಗ ಶ್ರೀಗಳು ಹೇಳಿದರು.

೮೯ ವರ್ಷಗಳ ಕಾಲ ನಿರಂತರವಾದ ಸನ್ಯಾಸ ಜೀವನವನ್ನು ನಡೆಸಿದ ಶ್ರೀ ಶಿವಕುಮಾರ ಸ್ವಾಮೀಜಿಯವರು ಶ್ರೀಮಠವನ್ನು ಎಲ್ಲ ರೀತಿಯಲ್ಲೂ ಅಭಿವೃದ್ಧಿಗೊಳಿಸಿದ್ದಾರೆ. ಅವರು ಎಂದೂ ಸಹ ನಮ್ಮ ನಡುವೆಯೇ ಇರುತ್ತಾರೆ. ಅವರ ಆಶೀರ್ವಾದವೂ ನಮ್ಮೆಲ್ಲರ ಮೇಲಿರುತ್ತದೆ ಎಂದು ಶ್ರೀಗಳು ಹೇಳಿದರು.

ಶ್ರೀಗಳು ತಮಗಾಗಿ ಏನನ್ನೂ ಬಯಸಿದವರಲ್ಲ. ಅವರಿಗಾಗಿ ಕಾರ್ಯಕ್ರಮವನ್ನು ಮಾಡುತ್ತೇವೆ ಎಂದರೆ ನಿರಾಕರಣೆ ಮಾಡುತ್ತಿದ್ದರು. ಆದರೆ, ಇದು ಮಕ್ಕಳಿಗೋಸ್ಕರ ಮಾಡುವುದಾಗಿದೆ. ಕಾರ್ಯಕ್ರಮ ನಡೆಸಿದರೆ ಅವರ ವಿದ್ಯಾಭ್ಯಾಸಕ್ಕೆ ಕಟ್ಟಡವನ್ನು ಕಟ್ಟಲು ಸಹಾಯಕವಾಗುವ ಕೆಲಸಗಳು ಆಗುತ್ತವೆ ಎಂದು ಹೇಳಿದಾಗ ಶ್ರೀಗಳು ಕಾರ್ಯಕ್ರಮವನ್ನು ಮಾಡಲು ಒಪ್ಪಿದ ಉದಾಹರಣೆಗಳು ಸಾಕಷ್ಟಿವೆ. ಕೂಡಲ ಸಂಗಮ ಕೊಟ್ಟಿರುವಂಥದ್ದನ್ನು, ಕೂಡಲಸಂಗಮನಿಗೇ ಅರ್ಪಣೆಯಾಗಬೇಕು ಎಂಬ ಭಾವನೆಯನ್ನು ಶ್ರೀಗಳು ಹೊಂದಿದ್ದವರು ಎಂದು ಸಿದ್ದಲಿಂಗ ಶ್ರೀಗಳು ಹೇಳಿದರು.

ಕಳೆದ 2 ವರ್ಷಗಳಲ್ಲಿ ಕೊರೊನಾದಿಂದಾಗಿ ಇಂತಹ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದಲಿಂಗ ಶ್ರೀಗಳು ತಿಳಿಸಿದರು.

ಇದನ್ನೂ ಓದಿ | ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ: ತುಳಿತಕ್ಕೊಳಗಾದ ಸಮಾಜವನ್ನು ಮೇಲೆತ್ತೋಣ; ಬಿ.ವೈ. ವಿಜಯೇಂದ್ರ

Exit mobile version