ಶಿವಮೊಗ್ಗ: ಮಲೆನಾಡಿನಲ್ಲಿ ಕೊನೆಗೂ ಲೋಹದ ಹಕ್ಕಿಗಳ ಕಲರವ ಗರಿಗೆದರಲು ಮುಹೂರ್ತ ಕೂಡಿ ಬಂದಿದೆ. ಆಗಸ್ಟ್ 8ರಂದು ಶಿವಮೊಗ್ಗದ ವಿಮಾನ ನಿಲ್ದಾಣದಿಂದ (Shivamogga Airport) ಇಂಡಿಗೋ (IndiGo flight) ಸಂಸ್ಥೆಯ ಮೊದಲ ವಿಮಾನ ಬೆಂಗಳೂರಿನತ್ತ ಹಾರಲಿದೆ. ಹಾಗಾದರೆ ಎಷ್ಟು ವಿಮಾನ ಹಾರಾಡಲಿದೆ? ಅದರ ವೇಳಾಪಟ್ಟಿಯೇನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಗಣ್ಯರ ಓಡಾಟಕ್ಕೆ ವಿಮಾನ ನಿಲ್ದಾಣ ನೆರವಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇಲ್ಲಿ ಬಂದಿಳಿದಿದ್ದರು. ಉದ್ಘಾಟನೆ ಆದಾಗಿನಿಂದಲೂ ಇಲ್ಲಿಂದ ವಿಮಾನ ಕಾರ್ಯಾಚರಣೆ ಆರಂಭವಾಗುವುದನ್ನು ಮಲೆನಾಡಿನ ಜನರು ಕಾಯುತ್ತಿದ್ದಾರೆ. ಅಂತೂ ಐದು ತಿಂಗಳ ನಂತರ ಈ ಕನಸು ನನಸಾಗಲು ಮುಹೂರ್ತ ನಿಗದಿ ಆಗಿದೆ.
ಇದನ್ನೂ ಓದಿ: Hydropower Project: ಚೀನಾ ಗಡಿಯಲ್ಲಿ ಭಾರೀ ವೆಚ್ಚದ ಮೆಗಾ ಹೈಡ್ರೋಪವರ್ ಪ್ರಾಜೆಕ್ಟ್! 213 ಶತಕೋಟಿ ರೂ. ವೆಚ್ಚ
ಸ್ಥಳೀಯರಲ್ಲಿ ಮೂಡಿದ ಖುಷಿ
ಮಲೆನಾಡಿನಲ್ಲಿ ಹೆಚ್ಚಾಗಿ ಕೃಷಿ ಚಟುವಟಿಕೆ ಸಹ ಹೆಚ್ಚಾಗಿದೆ. ರೈತಾಪಿ ವರ್ಗದವರು ಇಲ್ಲಿ ಹೆಚ್ಚಿದ್ದಾರೆ. ಇನ್ನು ಮಧ್ಯಮ ವರ್ಗದವರಿಗೆ ಒಮ್ಮೆಯಾದರೂ ವಿಮಾನದಲ್ಲಿ ಸಂಚಾರ ಮಾಡಬೇಕು ಎಂಬ ಹಂಬಲ ಮೊದಲಿನಿಂದಲೂ ಇತ್ತು. ಈಗ ಶಿವಮೊಗ್ಗದಲ್ಲಿಯೇ ವಿಮಾನ ಸಂಚಾರ ಆಗುತ್ತಿರುವುದರಿಂದ ತಾವು ಸಹ ವಿಮಾನವನ್ನು ಹತ್ತುತ್ತೇವೆ ಎಂದು ಸ್ಥಳೀಯ ನಿವಾಸಿಗಳು ಖುಷಿಯಿಂದ ಹೇಳುತ್ತಿದ್ದಾರೆ. ಹೀಗಾಗಿ ಕೆಲವರು ಈಗಲೇ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.
ವೇಳಾಪಟ್ಟಿ ಹೀಗಿರಲಿದೆ
ಹೌದು, ವಿಮಾನ ಸೇವೆ ಆ.8ರಿಂದ ಆರಂಭವಾಗುವ ಸುಳಿವನ್ನು ಸಂಸದ ಬಿ.ವೈ. ರಾಘವೇಂದ್ರ ಕೊಟ್ಟಿದ್ದಾರೆ. ಇದು ಶಿವಮೊಗ್ಗದ ಜನತೆ ಮಟ್ಟಿಗೆ ಖುಷಿಯ ವಿಚಾರವಾಗಿದೆ. ವಿಮಾನ ಪ್ರತಿದಿನ ಬೆಳಗ್ಗೆ 9ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಲಿದೆ. ಶಿವಮೊಗ್ಗಕ್ಕೆ ಬೆಳಿಗ್ಗೆ 10.30ಕ್ಕೆ ಬರಲಿದೆ. ಮಧ್ಯಾಹ್ನ 12ಕ್ಕೆ ವಾಪಸ್ ತೆರಳಲಿದೆ. ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಲಿದೆ. ಇಂಡಿಗೋ ಸಂಸ್ಥೆಯ ಎಟಿಆರ್ 72 ಮಾದರಿಯ 78 ಆಸನಗಳ ವಿಮಾನ ಹಾರಾಟ ಆರಂಭಿಸಲಿದೆ. ಜುಲೈ ಮೊದಲ ವಾರ ವಿಮಾನ ಹಾರಾಟಕ್ಕೆ ಅಧಿಕೃತ ಚಾಲನೆಯ ಸಂಭ್ರಮ ನಡೆಯಲಿದ್ದು, ಅಂದಿನಿಂದ ಬುಕಿಂಗ್ ಕೂಡ ಆರಂಭಿಸುವ ಬಗ್ಗೆ ಇಂಡಿಗೋ ಸಂಸ್ಥೆ ಯೋಜಿಸಿದೆ.
ನವದೆಹಲಿಗೂ ಸಂಪರ್ಕ ಕಲ್ಪಿಸಲು ಸಂಸದ ರಾಘವೇಂದ್ರ ಮನವಿ
ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆಗಳನ್ನು ಉಡಾನ್‌ನ ಪ್ರಾದೇಶಿಕ ಸಂಪರ್ಕ ಯೋಜನೆಯಲ್ಲಿ ಸೇರಿಸುವ ಬಗ್ಗೆ ಪರಿಗಣಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ವಿಮಾನಯಾನ ಸಚಿವಾಲಯವನ್ನು ಈಗಾಗಲೇ ಸಂಪರ್ಕಿಸಿದ್ದಾರೆ. ಇದಲ್ಲದೆ, ಶಿವಮೊಗ್ಗ ಮತ್ತು ನವದೆಹಲಿ ನಡುವೆ ವಿಮಾನಯಾನವನ್ನು ಪ್ರಾರಂಭಿಸುವ ಬಗ್ಗೆ ಪರಿಗಣಿಸಬೇಕು ಎಂದು ಸಹ ಅವರು ವಿಮಾನಯಾನ ಸಂಸ್ಥೆಗಳನ್ನು ವಿನಂತಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ನವ ದೆಹಲಿಗೂ ಪ್ರಯಾಣ ಆರಂಭವಾಗಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ
ಶಿವಮೊಗ್ಗದಿಂದ 8.8 ಕಿ.ಮೀ ದೂರದಲ್ಲಿರುವ ಸೋಗಾನೆಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸುಮಾರು 450 ಕೋಟಿ ರೂಪಾಯಿ ವೆಚ್ಚ ತಗುಲಿದೆ. ಪ್ರಯಾಣಿಕರ ಟರ್ಮಿನಲ್ ಕಟ್ಟಡವನ್ನು ಗಂಟೆಗೆ 300 ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಒಟ್ಟಿನಲ್ಲಿ, ಶಿವಮೊಗ್ಗದಿಂದ ರಾಜ್ಯದ ರಾಜಧಾನಿಗೆ ವಿಮಾನ ಹಾರಾಟಕ್ಕೆ ಸಿದ್ಧತೆ ನಡೆದಿರುವುದು ಮಲೆನಾಡಿನ ಜನರಲ್ಲಿ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸಲಿ ಎಂಬುದೇ ಇಲ್ಲಿನ ಜನರ ಆಶಯವಾಗಿದೆ.