Site icon Vistara News

Shivamogga Airport: ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮ ಹೆಸರಿಡಿ; ವೀರ ಶಿವಪ್ಪ ನಾಯಕ ವೇದಿಕೆಯಿಂದ ಮನವಿ

shivamogga Airport Keladi Rani Chennammaji name sagara

#image_title

ಸಾಗರ: ಶಿವಮೊಗ್ಗದಲ್ಲಿ ಫೆ. 27ರಂದು ಲೋಕಾರ್ಪಣೆಗೊಳ್ಳಲಿರುವ ವಿಮಾನ ನಿಲ್ದಾಣಕ್ಕೆ (Shivamogga Airport) ಕೆಳದಿ ರಾಣಿ ಚೆನ್ನಮ್ಮ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ವೀರ ಶಿವಪ್ಪ ನಾಯಕ ವೇದಿಕೆಯ ವತಿಯಿಂದ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಶುಕ್ರವಾರ (ಫೆ.೧೭) ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಕೆ.ವಿ.ಪ್ರವೀಣ್, “ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಯಾವುದೋ ಉದ್ದೇಶ ಇರಿಸಿಕೊಂಡು, ಯಾರನ್ನೋ ಮೆಚ್ಚಿಸಲು ಹೆಸರನ್ನು ಇರಿಸುವ ಬದಲು, 26 ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿ, ಔರಂಗಜೇಬನ ಸೈನ್ಯವನ್ನು ಎದುರು ಹಾಕಿಕೊಂಡು ಶಿವಾಜಿ ಪುತ್ರ ರಾಜಾರಾಮನನ್ನು ರಕ್ಷಣೆ ಮಾಡಿದ ಕೆಳದಿ ರಾಣಿ ಚೆನ್ನಮ್ಮ ಅವರ ಹೆಸರನ್ನು ಇಡುವತ್ತ ಸರ್ಕಾರ ಗಮನ ಹರಿಸಬೇಕು” ಎಂದು ಹೇಳಿದರು.

ಇದನ್ನೂ ಓದಿ: Karnataka Budget 2023: ರಾಜ್ಯ ಬೊಕ್ಕಸಕ್ಕೆ ಎಲ್ಲಿಂದ ಹಣ? (ಪೈಸೆಗಳಲ್ಲಿ ಲೆಕ್ಕಾಚಾರ)

“ಕೆಳದಿ ಚೆನ್ನಮ್ಮ ಅವರ ಆಳ್ವಿಕೆಯಲ್ಲಿ ಎಲ್ಲ ಜಾತಿ ಜನಾಂಗವನ್ನು ಸಮಾನವಾಗಿ ನೋಡಲಾಗುತಿತ್ತು. ಇತಿಹಾಸದಲ್ಲಿ ದಾಖಲಾಗುವಂತಹ ಆಡಳಿತವನ್ನು ಕೆಳದಿ ಅರಸರು ನೀಡಿದ್ದರು. ಮೈಸೂರು ಅರಸರಿಗೆ, ವಿಜಯ ನಗರ ಅರಸರಿಗೆ ಸಿಕ್ಕಷ್ಟು ಗೌರವ ಕೆಳದಿ ಅರಸರಿಗೆ ದೊರೆಯದೇ ಇರುವುದು ಬೇಸರದ ಸಂಗತಿ. ಈ ಹಿನ್ನೆಲೆಯಲ್ಲಿ ಸರ್ಕಾರವು ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮ ಹೆಸರನ್ನು ನಾಮಕರಣ ಮಾಡುವ ಮೂಲಕ ಕೆಳದಿ ಸಂಸ್ಥಾನಕ್ಕೆ ಮಾನ್ಯತೆ ನೀಡಬೇಕು” ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಳವಾಯಿ ದಾನಪ್ಪ, ಪ್ರಕಾಶ್ ಗೌಡ, ಬಾಬು ಗೌಡ, ಮಧುಮಾಲತಿ, ಗುರು ಕಾಗೋಡು, ಉಮೇಶ್, ಚಂದ್ರಶೇಖರ್, ಗಂಗಾಧರ ಗೌಡ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: Jio True 4G digital Life: ರಿಲಯನ್ಸ್ ಜಿಯೋದಿಂದ ತಲಕಾವೇರಿಯಲ್ಲಿ ಟ್ರೂ 4ಜಿ ಡಿಜಿಟಲ್ ಲೈಫ್ ಆರಂಭ

Exit mobile version