ಶಿವಮೊಗ್ಗ: ಭದ್ರಾವತಿ ಕಾರ್ಖಾನೆ (ವಿಐಎಸ್ಎಲ್) ಉಳಿಸಲು ಸರ್ವ ಪ್ರಯತ್ನ ಮುಂದುವರಿಯಲಿದೆ. ಇನ್ನು ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆದಿದ್ದು, ಕೇಂದ್ರ ಸರ್ಕಾರಕ್ಕೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ೬೦ ವರ್ಷಗಳ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಯಾವುದೇ ನೇಮಕಾತಿ ನಡೆಯುತ್ತಿಲ್ಲ. ಯಾರೂ ಇದನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಯುವ ಜನತೆ ಈ ಮೋಸಕ್ಕೆ ಬಲಿಯಾಗಬಾರದು. ಫೆ.೮-೧೦ ಡಿಜಿಸಿಎ ತಂಡವು ವಿಮಾನ ನಿಲ್ದಾಣದ ಅಂತಿಮ ಪರಿಶೀಲನೆ ನಡೆಸಲಿದೆ ಎಂದರು.
ಇಡೀ ವಿಶ್ವ ಆರ್ಥಿಕವಾಗಿ ಸವಾಲು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜನಪರ ಬಜೆಟ್ ಮಂಡನೆ ಮಾಡಿದೆ. ಎಲ್ಲ ವರ್ಗದವರಿಗೆ ಆದ್ಯತೆ ನೀಡಲಾಗಿದೆ. ಮಧ್ಯಮ ವರ್ಗದವರಿಗೆ ಅನುಕೂಲವಾಗುವ ದೃಷ್ಟಿಯಿಂದ ೭ ಲಕ್ಷ ರೂಪಾಯಿವರೆಗೆ ತೆರಿಗೆ ರಿಯಾಯಿತಿ ಸಿಕ್ಕಿದೆ. ಆರೋಗ್ಯ ಕ್ಷೇತ್ರದಲ್ಲೂ ವಿಶೇಷ ಆದ್ಯತೆ ನೀಡಲಾಗಿದೆ. ಮಹಿಳೆಯರಿಗೆ ಆರ್ಥಿಕ ಸೌಲಭ್ಯ ಒದಗಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ದು, ಯೋಜನೆಯಿಂದ ಮಧ್ಯ ಕರ್ನಾಟಕದ ರೈತರಿಗೆ ನೆರವಾಗಲಿದೆ ಎಂದರು.
ಇದನ್ನೂ ಓದಿ: ಬೇಹುಗಾರಿಕೆಗಾಗಿ ಅಮೆರಿಕಕ್ಕೆ ಬಲೂನ್ ಬಿಟ್ಟ ಚೀನಾ; ಹೊಡೆದುರುಳಿಸಲು ಹಿಂದೇಟು ಹಾಕುತ್ತಿರುವ ಪೆಂಟಗನ್!
ಆರ್ಥಿಕತೆಯಲ್ಲಿ ಭಾರತ ೫ನೇ ಸ್ಥಾನಕ್ಕೆ ಏರಿದೆ. ಯುರೋಪ್ ದೇಶಗಳನ್ನು ಭಾರತ ಹಿಂದಿಕ್ಕಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ. ಉಜ್ವಲವಾದ ನಕ್ಷತ್ರದಂತೆ ಭಾರತವನ್ನು ಜಗತ್ತು ನೋಡುತ್ತಿದೆ ಎಂದರು.
ಕೇಂದ್ರ, ರಾಜ್ಯ ಸರ್ಕಾರದ ಸಹಕಾರದಲ್ಲಿ ಎನ್ಎಸ್‌ಸಿಎಂನಿಂದ ಕೆಟಗರಿ ೨ ಸೈನ್ಸ್ ಮ್ಯೂಸಿಯಂ ಸ್ಥಾಪನೆಗೆ ೧೫.೨೦ ಕೋಟಿ ರೂ. ಬಿಡುಗಡೆಯಾಗಿದೆ. ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಇದು ಸ್ಥಾಪನೆಯಾಗಲಿದ್ದು, ೬.೫೫ ಕೋಟಿ ರೂ. ಕೇಂದ್ರದಿಂದ ಅನುದಾನ ಸಿಗಲಿದೆ. ಉಳಿದ ಅನುದಾನ ರಾಜ್ಯ ಸರ್ಕಾರ ಭರಿಸಲಿದೆ. ಇದರಿಂದ ಗ್ರಾಮೀಣ ಭಾಗದ ವಿಜ್ಞಾನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಕೆಟಗರಿ 1ಕ್ಕೇರಿಸಲು ಪ್ರಯತ್ನಿಸಲಾಗುವುದು. ಸಹ್ಯಾದ್ರಿ ಕಾಲೇಜಿನಲ್ಲಿ ಖೇಲೋ ಇಂಡಿಯಾ ಯೋಜನೆ ಕೈಬಿಡಲಾಗಿದ್ದು, ಅದನ್ನು ಶಿವಮೊಗ್ಗದ ಬೇರೆ ಕಡೆ ಸ್ಥಳಾಂತರಿಸಲು ಚಿಂತಿಸಲಾಗಿದೆ ಎಂದರು.
ಇದನ್ನೂ ಓದಿ: Rashmika Mandanna: ಅಭಿಮಾನಿಗೇ ಪ್ರಪೋಸ್ ಮಾಡಿದ ರಶ್ಮಿಕಾ ಮಂದಣ್ಣ! ವೈರಲ್ ಆಯ್ತು ವಿಡಿಯೊ
ಸುದ್ದಿಗೋಷ್ಠಿಯಲ್ಲಿ ಶಾಸಕ ಅಶೋಕ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಕಾರ್ಯದರ್ಶಿ ಮಹಾಂತೇಶ್, ಸುಡಾ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ಮಾಧ್ಯಮ ಪ್ರಮುಖ ಅಣ್ಣಪ್ಪ ಮತ್ತಿತರರು ಇದ್ದರು.