ಸಬಾಸ್ಟಿನ್, ವಿಸ್ತಾರ ನ್ಯೂಸ್
ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ (Hosanagara) ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನ ಸಂಪಳ್ಳಿ ಗ್ರಾಮದ ಶಶಿಕಲಾ ಎಂಬ ಮಹಿಳೆ ಅಂಗವಿಕಲ, ಬುದ್ಧಿಮಾಂದ್ಯ (Mentally retarded) ಮಗಳೊಂದಿಗೆ ವಾಸಿಸಲು ಮನೆ (House) ಸೇರಿದಂತೆ ಮೂಲಭೂತ ಸೌಕರ್ಯವಿಲ್ಲದೇ (Infrastructure) ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಕಳೆದ 25 ವರ್ಷಗಳ ಹಿಂದೆ ಭೋಜಪ್ಪ ಎನ್ನುವವರ ಜತೆ ವಿವಾಹವಾಗಿ ಬಂದ ಶಶಿಕಲಾ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಮಗಳು ಪೂಜಾ ಹುಟ್ಟುತ್ತಲೇ ಬುದ್ಧಿಮಾಂದ್ಯಳಾಗಿದ್ದು ಅವಳಿಗೆ ವೈದ್ಯಕೀಯ ವೆಚ್ಚ ಬರಿಸಲಾಗದೆ ಸಾಧ್ಯವಾದಷ್ಟು ಮಟ್ಟಕ್ಕೆ ಚಿಕಿತ್ಸೆ ಕೊಡಿಸಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು.
ಆದರೆ ಆರು ವರ್ಷಗಳ ಹಿಂದೆ ಪತಿ ಭೋಜಪ್ಪ ತೀರಿಕೊಂಡಿದ್ದು ಕಿವಿ ಕೇಳದಿರುವ ಶಶಿಕಲಾ ಅವರ ಜೀವನ ಇನ್ನಷ್ಟು ಕಷ್ಟಕರವಾಗಿದೆ. ಹೀಗೆ ಒಂದರ ಮೇಲೊಂದು ಕಷ್ಟಗಳನ್ನು ಎದುರಿಸುತ್ತಿರುವ ಶಶಿಕಲಾ ಕುಟುಂಬ ಆರು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ತಮ್ಮ ವಾಸವಿರುವ ಮನೆ ಗೋಡೆ ಸಹಿತ ಕುಸಿದು ಬಿದ್ದ ಪರಿಣಾಮ ಶಶಿಕಲಾ ಕುಟುಂಬ ಬೀದಿಗೆ ಬಿದ್ದಿದೆ.
ಇದನ್ನೂ ಓದಿ: Ramon Magsaysay Award: ಅಸ್ಸಾಮ್ ಮೂಲದ ಕ್ಯಾನ್ಸರ್ ತಜ್ಞ ಡಾ. ರವಿ ಕಣ್ಣನ್‌ಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ!
ಹೀಗೆ ಸಾಲು ಸಾಲು ಕಷ್ಟಗಳನ್ನು ಎದುರಿಸುತ್ತಿರುವ ಶಶಿಕಲಾ ಕುಟುಂಬಕ್ಕೆ ವಾಸವಿರಲು ಯೋಗ್ಯ ಮನೆಯೂ ಇಲ್ಲ, ಕೆಲಸ ಮಾಡಲು ಶಕ್ತಿಯೂ ಇಲ್ಲ, ಮಗಳ ಆರೋಗ್ಯವೂ ಕೂಡ ಸರಿ ಇಲ್ಲ, ಇಂತಹ ಪರಿಸ್ಥಿತಿಯಲ್ಲಿರುವ ಶಶಿಕಲಾ ಅವರು ಅದೇ ಊರಿನ ಮನೆಯ ಪಕ್ಕದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಕಳೆದ ಆರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ.
ದಿಢೀರನೆ ಮನೆ ಕುಸಿದು ಬಿದ್ದಿದ್ದರಿಂದ ತಮ್ಮ ದಾಖಲಾತಿಗಳೆಲ್ಲವನ್ನು ಕಳೆದುಕೊಂಡ ಶಶಿಕಲಾ ರವರಿಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸಿಕ್ಕಿರುವ ಬಿಪಿಎಲ್ ಕಾರ್ಡ್ ಕೂಡ ಅಂದೇ ನಾಶವಾಗಿದೆ.
ಅಂದಿನಿಂದ ಇಂದಿನವರೆಗೂ ಸಮಾಜದ ಕಟ್ಟ ಕಡೆಯ ನಿರ್ಗತಿಕ ಹಿಂದುಳಿದ ವರ್ಗದ ಕುಟುಂಬಕ್ಕೆ ಸರ್ಕಾರದ ಯಾವ ಯೋಜನೆಗಳು ತಲುಪದಿರುವುದು ಗ್ರಾಮಾಡಳಿತ ಹಾಗೂ ತಾಲೂಕು ಆಡಳಿತದ ನಿರ್ಲಕ್ಷವೇ ಸರಿ.
ಕನಿಷ್ಠ ಮೂಲಭೂತ ಸೌಕರ್ಯಗಳಾದ ಶೌಚಾಲಯ, ವಿದ್ಯುತ್, ನೀರಿನ ವ್ಯವಸ್ಥೆಗಳಿಲ್ಲದೇ ಕತ್ತಲಲ್ಲಿ ಕಾಲ ಕಳೆಯುತ್ತಾ ನರಕಯಾತನೆ ಅನುಭವಿಸುತ್ತಿದ್ದಾರೆ, ಆದರೆ ಇತ್ತ ಗಮನಹರಿಸಿ ನೆರವು ಕಲ್ಪಿಸಲು ಮುಂದಾಗಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಬುದ್ದಿಮಾಂದ್ಯ ಅಂಗವಿಕಲ ಮಗಳನ್ನು ಸಮುದಾಯ ಭವನದ ಕಟ್ಟಡದಲ್ಲಿ ಕೂಡಿ ಹಾಕಿ ದಿನವೆಲ್ಲ ಊರಿನವರ ನಾಲ್ಕಾರು ಮನೆಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಆಹಾರ ಅರಸಿ ಜೀವಿಸುತ್ತಿದ್ದಾರೆ ಶಶಿಕಲಾ.
ಇದನ್ನೂ ಓದಿ: India GDP Growth: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್-ಜೂನ್‌ನಲ್ಲಿ ಶೇ.7.8 ಜಿಡಿಪಿ ದಾಖಲಿಸಿದ ಭಾರತ
ಸ್ವಂತ ಜಾಗವನ್ನು ಹೊಂದಿರುವ ಈಕೆಗೆ ಆಶ್ರಯ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಟ್ಟು ಬುದ್ಧಿಮಾಂದ್ಯ ಅಂಗವಿಕಲ ಮಗಳ ಚಿಕಿತ್ಸೆಗೆ ನೆರವಾಗುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂಬುದು ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.