ಶಿವಮೊಗ್ಗ: ಬ್ಯಾಂಕುಗಳು (Banks) ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಕ್ಕೆ (Educational loans) ಸಂಬಂಧಿಸಿದಂತೆ ಹೆಚ್ಚಿನ ಗಮನ ನೀಡಿ, ಸಾಲ ಪಡೆಯುವಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ, ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ (education news) ಬ್ಯಾಂಕುಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ (ಡಿಎಲ್‍ಆರ್‍ಸಿ) ಮತ್ತು ಡಿಸಿಸಿ ಬ್ಯಾಂಕರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2022-23 ನೇ ಸಾಲಿನಲ್ಲಿ ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಕೇವಲ ಶೇ.8.76 ಪ್ರಗತಿ ಸಾಧಿಸಲಾಗಿದೆ. 466.1 ಕೋಟಿ ಗುರಿಯಲ್ಲಿ 44.81 ಕೋಟಿ ಮಾತ್ರ ಸಾಲ ನೀಡಲಾಗಿದೆ. ಶೈಕ್ಷಣಿಕ ಗುರಿ ಸಾಧಿಸಲು ತೊಡಕಾಗಿರುವ ಅಂಶಗಳ ಕುರಿತು ಬ್ಯಾಂಕುಗಳು ಮತ್ತು ಜಿ.ಪಂ ಸಿಇಓ ಪರಿಶೀಲನೆ ನಡೆಸಬೇಕು. ಬಂದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಹಾಗೂ ಸ್ವಲ್ಪ ಉದಾರತೆಯಿಂದ ನಡೆದುಕೊಂಡಲ್ಲಿ ಹೆಚ್ಚು ಅರ್ಜಿಗಳು ಬರಬಹುದು. ಈ ನಿಟ್ಟಿನಲ್ಲಿ ಕ್ರಮ ವಹಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ತಿಳಿಸಿದರು.
ಇದನ್ನೂ ಓದಿ: Asian Athletics Championships : ಚಿನ್ನ ಗೆದ್ದ ಶಾಟ್ಪುಟ್ ಪಟು ತಜಿಂದರ್ ಪಾಲ್ ಸಿಂಗ್
ಪಾಲಿಕೆ ವಸತಿ ವಿಭಾಗದ ಅಧಿಕಾರಿ ಶಶಿಧರ್ ಮಾತನಾಡಿ, ಗೋವಿಂದಾಪುರ ವಸತಿ ಯೋಜನೆಯಡಿ ಈಗಾಗಲೇ 600 ಮನೆಗಳನ್ನು ಲಾಟರಿ ಮೂಲಕ ಹಂಚಿದ್ದು, ಫಲಾನುಭವಿಗಳಿಗೆ ಬ್ಯಾಂಕ್‍ಗಳಿಂದ ಸಾಲ ಮಂಜೂರಾದಲ್ಲಿ ಮನೆಗೆ ಪ್ರವೇಶಿಸಲು ಸಿದ್ದರಿದ್ದಾರೆ. ಹಾಗೂ ಇನ್ನೂ 600 ಮನೆಗಳು ಸಿದ್ದವಿದ್ದು ಅವರ ಅರ್ಜಿಗಳು ಬ್ಯಾಂಕಿನಲ್ಲಿ ಬಾಕಿ ಇವೆ. ಫಲಾನುಭವಿ ಸಾಲಕ್ಕೆ ಸಂಬಂಧಿಸಿದಂತೆ ಅವರ ವಯಸ್ಸಿನ ಆಧಾರದಲ್ಲಿ ನಿಗದಿತ ಸಾಲ ದೊರೆಯುವಲ್ಲಿ ಕಷ್ಟವಾಗುತ್ತಿದೆ. ಆದ್ದರಿಂದ ಕೋವಾಲೆಂಟ್ ಸಾಲ ನೀಡಿದಲ್ಲಿ ಸಮಸ್ಯೆಗೆ ಪರಿಹಾರ ಒದಗಬಹುದು ಎಂದರು.
ಕೆನರಾ ಬ್ಯಾಂಕ್ ಎಜಿಎಂ ವೆಂಕಟರಾಮುಲು ಪ್ರಾಸ್ತಾವಿಕವಾಗಿ ಮಾತನಾಡಿ, ಲೀಡ್ ಬ್ಯಾಂಕ್‍ನಡಿ 325 ಶಾಖೆಗಳಿದ್ದು, 2023 ನೇ ಸಾಲಿನ ಮಾರ್ಚ್ 31 ರವರೆಗೆ 38,149 ಕೋಟಿ ವ್ಯವಹಾರ ನಡೆದಿದೆ. ಕಳೆದ ಬಾರಿ ಜಿಲ್ಲೆಯ ಸಿಡಿ ಅನುಪಾತ ಶೇ.67 ಇದ್ದು ಈ ಬಾರಿ ಶೇ.73 ಕ್ಕೆ ಏರಿಕೆಯಾಗಿದ್ದು ಶೇ.6 ಪ್ರಗತಿಯಾಗಿದೆ. ಕೃಷಿ ರಂಗದಲ್ಲಿ 2022 ರ ಮಾರ್ಚ್ ರಿಂದ 2023 ರ ಮಾರ್ಚ್‍ವರೆಗೆ ಶೇ. 78 ಗುರಿ ಸಾಧಿಸಲಾಗಿದೆ. ಎಂಎಸ್‍ಎಂಇ ಕ್ಷೇತ್ರದಲ್ಲಿ 116.24, ಶಿಕ್ಷಣದಲ್ಲಿ 8.76, ವಸತಿ ಶೇ12.49 ಇತರೆ ಆದ್ಯತಾ ವಲಯದಲ್ಲಿ ಶೇ. 13.84, ಒಟ್ಟು ಆದ್ಯತಾ ವಲಯದಲ್ಲಿ ಶೇ73.01 ಸೇರಿದಂತೆ ಎಲ್ಲ ವಲಯಗಳು ಸೇರಿ ಶೇ.78.87 ಪ್ರಗತಿ ಸಾಧಿಸಲಾಗಿದೆ ಎಂದು ವಿವರಣೆ ನೀಡಿದರು.
ಇದನ್ನೂ ಓದಿ: KREDL Dividends : ರಾಜ್ಯ ಸರ್ಕಾರಕ್ಕೆ 20.96 ಕೋಟಿ ಡಿವಿಡೆಂಡ್ ಸಲ್ಲಿಸಿದ ಕ್ರೆಡಲ್
ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಕೃಷಿ, ಎಂಎಸ್‍ಎಂಇ, ವಸತಿ, ಶಿಕ್ಷಣ, ಆದ್ಯತಾ ವಲಯಗಳಲ್ಲಿ ಸೌಲಭ್ಯ ನೀಡುವಲ್ಲಿ ಕಡಿಮೆ ಪ್ರಗತಿ ಸಾಧಿಸಿರುವ ಬ್ಯಾಂಕುಗಳು ಮುಂದಿನ ತ್ರೈಮಾಸಿಕದೊಳಗೆ ನಿಗದಿತ ಗುರಿಯನ್ನು ಸಾಧಿಸಬೇಕು. ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಪ್ರಗತಿ ತೀರ ಕಡಿಮೆ ಇದೆ. ದಾಖಲಾತಿಗಳು ಸಮರ್ಪಕವಾಗಿಲ್ಲವೆಂದು ಹೇಳಿ ಅರ್ಜಿ ತಿರಸ್ಕರಿಸುವುದು ಸೂಕ್ತವಲ್ಲ. ನಿಯಮಗಳನ್ನು ಕೊಂಚ ಸಡಿಲಗೊಳಿಸಿ ವಿದ್ಯಾರ್ಥಿಗಳಿಗೆ ಸಾಲ ನೀಡಬೇಕು. ಮತ್ತು ಎಂಎಸ್‍ಎಂಇ ಗುರಿ ಸಾಧನೆ ಕಡೆ ಗಮನ ಹರಿಸಬೇಕು. ಜಿಲ್ಲೆಯಲ್ಲಿ 11 ಸಾವಿರ ಸ್ವಸಹಾಯ ಗುಂಪುಗಳಿದ್ದು, ಮಹಿಳೆಯರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರತಿ ಗ್ರಾ.ಪಂ ಮಟ್ಟದಲ್ಲಿ ಇಂತಹ ಗುಂಪುಗಳು ಸ್ವಉದ್ಯೋಗಕ್ಕಾಗಿಕೆಲವು ಪ್ರಾಜೆಕ್ಟ್‍ಗಳನ್ನು ಹಾಕಿಕೊಂಡಿದ್ದು, ಬ್ಯಾಂಕುಗಳು ಇವುಗಳನ್ನು ಪರಿಶೀಲಿಸಿ ಸಾಲವನ್ನು ನೀಡಿ ಸಹಕರಿಸಬೇಕೆಂದು ವಿನಂತಿಸಿದರು.
ಆರ್‌ಬಿಐ ಎಲ್‍ಡಿಓ ಬಿಸ್ವಾಸ್ ಮಾತನಾಡಿ, ಜಿಲ್ಲೆಯ 5 ಬ್ಯಾಂಕುಗಳು ಪ್ರಗತಿಯಲ್ಲಿ ಹಿಂದಿವೆ. ನಿಗದಿತ ಪ್ರಗತಿ ಸಾಧಿಸಲು ಕ್ರಮಗಳನ್ನು ಕೈಗೊಂಡು ಪ್ರಗತಿ ಸಾಧಿಸಬೇಕು. ಎಲ್‍ಡಿಎಂ ಈ ಕುರಿತು ಪರಿಶೀಲಿಸಬೆಕು. ಹಾಗೂ ಪ್ರತಿ ಗ್ರಾಮೀಣ ಬ್ಯಾಂಕುಗಳು ಪ್ರತಿ ತಿಂಗಳು ಎಫ್‍ಎಲ್ ಸಿ ಶಿಬಿರಗಳನ್ನು ಮಾಡಿ ಜನರಿಗೆ ಮಾಹಿತಿ ನೀಡಬೇಕು. ವಿವಿಧ ಯೋಜನೆಗಳಡಿ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಿದರು.
ಇದನ್ನೂ ಓದಿ: Weather Report : ಕರಾವಳಿಯಲ್ಲಿ ನಾಳೆ ಮಳೆ ವೈಲೆಂಟ್; ದಕ್ಷಿಣ ಒಳನಾಡಿನಲ್ಲಿ ಫುಲ್ ಸೈಲೆಂಟ್!
ನಬಾರ್ಡ್ ಡಿಡಿಎಂ ಶರತ್ ಗೌಡ ಮಾತನಾಡಿದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಅಮರ್ ನಾಥ್ ಸ್ವಾಗತಿಸಿದರು. ಜಿಲ್ಲೆಯ ವಿವಿಧ ಬ್ಯಾಂಕುಳ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.