ಹೊಳೆಹೊನ್ನೂರು: ಇಲ್ಲಿನ ಮೂಲ ಬೃಂದಾವನದಲ್ಲಿ ಸನ್ನಿಹಿತರಾಗಿರುವ ನಮ್ಮ ಪರಂಪರೆಯ ಪೂರ್ವ ಯತಿಗಳಾದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಗ್ರಂಥಗಳಲ್ಲಿ ಜ್ಞಾನದ (knowledge) ಪರಿಶುದ್ಧತೆಯನ್ನು ಕಾಣಬಹುದಾಗಿದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.
ಬುಧವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಇದನ್ನೂ ಓದಿ: INDW vs BANW 3rd T20: ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಾಂಗ್ಲಾದೇಶ
ಪುರಾಣಗಳಿಗೆ, ವೇದಗಳಿಗೆ ಅನೇಕರು ತಮ್ಮ ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಆದರೆ ಶ್ರೀ ಸತ್ಯಧರ್ಮರ ಶೈಲಿಯೇ ಅಪರೂಪ. ಒಂದೊಂದು ಶಬ್ದಕ್ಕೆ ಅನೇಕಾರ್ಥ ನೀಡುವ, ಮೂಲ ಸಿದ್ಧಾಂತಕ್ಕೆ ಅಬಾ ಧಿತವಾಗಿ, ಸಂದರ್ಭಕ್ಕೆ ಅನುಸಾರವಾಗಿ ಎದುರಾಗುವ ಆಕ್ಷೇಪಗಳಿಗೆ ಉತ್ತರ, ವಿರೋಧ ಪರಿಹಾರ ಹೀಗೆ ಅವರ ವ್ಯಾಖ್ಯಾನ ಅತ್ಯದ್ಭುತವಾಗಿದೆ. ಶೈಲಿಯೂ ಕೂಡ ಕವಿ ಮನಸ್ಸಿನವರಿಗೆ ಆಹ್ಲಾದ ನೀಡುವಂತಿದೆ ಎಂದರು.
ವಿದ್ವತ್ ಸಭೆಯ ಆರಂಭದಲ್ಲಿ ದಾವಣಗೆರೆಯ ವೆಂಕಟಗಿರೀಶಾಚಾರ್ಯ ಮತ್ತು ಸಂಸ್ಥಾನ ಪೂಜಾ ಕಾಲದಲ್ಲಿ ಸಮೀರಾಚಾರ್ಯ ದೇಶಪಾಂಡೆ ಪ್ರವಚನ ಮಾಡಿದರು. ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಹಾಗೂ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Bidar News: ಅಂತಾರಾಜ್ಯ ಅಕ್ರಮ ಸಾಗಾಟ: 15.55 ಲಕ್ಷ ರೂ. ಮೌಲ್ಯದ ಗುಟ್ಕಾ ಜಪ್ತಿ
ಏಕಾದಶಿ ತಪ್ತಮುದ್ರಾ ಧಾರಣೆ
ಗುರುವಾರ ಏಕಾದಶಿಯ ನಿಮಿತ್ತ ನೂರಾರು ಭಕ್ತರು ಶ್ರೀಪಾದಂಗಳವರಿಂದ ತಪ್ತಮುದ್ರಾಧಾರಣೆ ಪಡೆದುಕೊಂಡರು. ಇದಕ್ಕಾಗಿ ದೂರದ ಊರುಗಳಿಂದ ಮಠದ ಶಿಷ್ಯರು ಆಗಮಿಸಿದ್ದರು. ನಂತರ ಶ್ರೀ ಮೂಲರಾಮ ದೇವರ ಪೂಜೆ ನೆರವೇರಿಸಿದ ಶ್ರೀಪಾದಂಗಳವರು ಕಾಮಿಕಾ ಏಕಾದಶಿಯಂದು ಹರಿವಾಣ ಸೇವೆಯನ್ನು ದೇವರಿಗೆ ಸಮರ್ಪಿಸಿದರು. ಶುಕ್ರವಾರ ದ್ವಾದಶಿಯಂದು ಬೆಳಗ್ಗೆ 5.30ರಿಂದಲೇ ಸಂಸ್ಥಾನ ದೇವರ ಪೂಜೆ ನಡೆಯಲಿದೆ.