ರಿಪ್ಪನ್‌ಪೇಟೆ: ಬಿಜೆಪಿ ಪಕ್ಷ (BJP Party) ತತ್ವ ಸಿದ್ದಾಂತದ ಶಿಸ್ತಿನ (Discipline) ಪಕ್ಷ, ನಮ್ಮ ಪಕ್ಷದ ಆಂತರಿಕ ಗೊಂದಲವನ್ನು ನಾಲ್ಕು ಗೋಡೆಯ ಮಧ್ಯೆ ಪಕ್ಷದ ಸಭೆಯಲ್ಲಿ ಕುಳಿತು ಚರ್ಚಿಸಿ, ಪರಿಹಾರವನ್ನು ಕಂಡುಕೊಳ್ಳುವುದು ಅಗತ್ಯ ಎಂದು ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿರಬಹುದು, ಆದರೆ ಸದಾ ಜನಸಾಮಾನ್ಯರ ಸಮಸ್ಯೆಗಳ ಪರ ಹೋರಾಟ ನಡೆಸುತ್ತಾ, ಅಧಿಕಾರದ ಆಸೆಗಾಗಿ ಎಂದೂ ನಾವು ಅಂಟಿಕೊಳ್ಳದೇ ಪಕ್ಷದ ತತ್ವ ಸಿದ್ಧಾಂತದೊಂದಿಗೆ ಸಂಘಟನೆಯಲ್ಲಿ ಬೆಳೆದುಬಂದವರು ಎಂಬುದನ್ನು ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಮರೆಯಬಾರದು ಎಂದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: Chaturmas 2023 : ಚಾತುರ್ಮಾಸ್ಯ ವ್ರತವನ್ನು ಗೃಹಸ್ಥರೂ ಮಾಡಬಹುದು!
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿಲ್ಲ ಗ್ಯಾರಂಟಿ ಕಾರ್ಡ್ ಗೆದ್ದಿದೆ, ಆದರೆ, ಅದನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ತಿಣುಕಾಡುತ್ತಿದೆ. ಈಗಾಗಲೇ ಗೃಹ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ವಿದ್ಯುತ್ ದರ ಹೆಚ್ಚಳದಿಂದಾಗಿ ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಹಿಂದಿನ ಸರ್ಕಾರ ವಿದ್ಯುತ್ ಬೆಲೆ ಹೆಚ್ಚಿಸಿದೆ ಎಂದು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬರುವ ಜುಲೈ 3 ರಿಂದ ಬಿಜೆಪಿ ಪಕ್ಷದ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದು, ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಇದನ್ನೂ ಓದಿ: ಜನರ ಕಣ್ಣೀರು ಒರೆಸಲು ಮಣಿಪುರಕ್ಕೆ ಹೋದ ರಾಹುಲ್ ಗಾಂಧಿ; ಅಶ್ರುವಾಯು ಪ್ರಯೋಗಿಸಿದ ಪೊಲೀಸ್
ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಪಕ್ಷದ ಮುಖಂಡರಾದ ಎಂ.ಸುರೇಶಸಿಂಗ್ ,ಕಗ್ಗಲಿ ನಿಂಗಪ್ಪ, ಸುಂದ್ರೇಶ್, ದೇವರಾಜ್ ಕೆರೆಹಳ್ಳಿ, ಮಹೇಶ ಮಾಣಿಕರೆ, ಸುದೀಂದ್ರ ಪೂಜಾರಿ, ರಾಮು ಬಳೆಗಾರ, ಬಿ.ಎನ್. ಅಶೋಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.