Site icon Vistara News

Shivamogga News: ಭಕ್ತಸಾಗರದ ಮಧ್ಯೆ ವಿಜೃಂಭಣೆಯಿಂದ ಜರುಗಿದ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿ ರಥೋತ್ಸವ

Chandragutti Sri Renukamba Devi Maharathotsava

ಸೊರಬ: ತಾಲೂಕಿನ ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಿಯ (Chandragutti Sri Renukamba Devi) ಮಹಾರಥೋತ್ಸವವು ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ (Shivamogga News) ಜರುಗಿತು.

ಶ್ರೀದೇವಿಯ ನಾಮಸ್ಮರಣೆಯೊಂದಿಗೆ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಭಕ್ತಾಧಿಗಳು ರಥಕ್ಕೆ ಕಾಳುಮೆಣಸು, ಉತ್ತುತ್ತಿ, ಬಾಳೆ ಹಣ್ಣು ಎಸೆದು, ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ರಾಜ್ಯ ಮತ್ತು ಹೊರರಾಜ್ಯದ ಲಕ್ಷಾಂತರ ಭಕ್ತರು ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವದ ಹಿನ್ನಲೆಯಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರೇಣುಕಾಂಬ ದೇವಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Vastu Tips: ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ

ಧಾರ್ಮಿಕ ಪೂಜಾ ಕೈಂಕರ್ಯಗಳು ಇಲ್ಲಿನ ಪ್ರಧಾನ ಅರ್ಚಕ ಅರವಿಂದ ಭಟ್ ಅವರ ನೇತೃತ್ವದಲ್ಲಿ ಜರುಗಿದವು.

ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ, ತ್ರಿಶೂಲದ ಭೈರಪ್ಪ, ದೇವರಿಗೆ ಜಾತ್ರೆಯ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.

ರೈತರು ತಾವು ಬೆಳೆದ ಅಡಿಕೆ, ಬಾಳೆ ಫಸಲನ್ನು ರಥಕ್ಕೆ ಸಮರ್ಪಿಸಿದರು, ಇನ್ನು ಭಕ್ತರು ಹೂವಿನ ಹಾರಗಳನ್ನು ಮೆರವಣಿಗೆ ಮೂಲಕ ತಂದು ರಥಕ್ಕೆ ಅರ್ಪಿಸುವುದು ವಿಶೇಷವಾಗಿತ್ತು.

ಹಾವೇರಿ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ, ಶಿವಮೊಗ್ಗ, ಬ್ಯಾಡಗಿ, ರಾಣೆಬೆನ್ನೂರು, ರಾಯಚೂರು, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕ ಮತ್ತು ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವ ಹಿನ್ನಲೆಯಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ:SRGMPS20: ‘ಸರಿಗಮಪ ಸೀಸನ್‌ 20’ರ ಫಿನಾಲೆ ಟ್ರೋಫಿ ಗೆದ್ದ ದರ್ಶನ್ ನಾರಾಯಣ್!

ಸಾಗರ ಉಪ ವಿಭಾಗಾಧಿಕಾರಿ ಆರ್. ಯತೀಶ್, ತಹಸೀಲ್ದಾರ್ ಹುಸೇನ್ ಸರಕಾವಸ್, ಸಹಾಯಕ ಚುನಾವಣಾಧಿಕಾರಿ ಬಿ. ರಾಜೇಶ್, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಸೇರಿದಂತೆ ತಾಲೂಕಿನ ಕಂದಾಯ ಇಲಾಖೆ, ರಕ್ಷಣಾ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕಿನ ಅನೇಕ ಪ್ರಮುಖರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Exit mobile version