ಶಿವಮೊಗ್ಗ: ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ತಮ್ಮ 28ನೇ ಚಾತುರ್ಮಾಸ್ಯ ವ್ರತವನ್ನು (Chaturmasya Vrata) ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು (Holehonnur) ಕ್ಷೇತ್ರದಲ್ಲಿ ಕೈಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀಪಾದಂಗಳವರು ಜು.11ರ ಮಂಗಳವಾರ ಸಂಜೆ 5 ಗಂಟೆಗೆ ಹೊಳೆಹೊನ್ನೂರು ಪುರಪ್ರವೇಶ ಮಾಡಲಿದ್ದಾರೆ. ಹೊಳೆಹೊನ್ನೂರು ಸರ್ಕಲ್‌ನಿಂದ ಶ್ರೀ ಮೂಲಸೀತಾ ರಾಮಚಂದ್ರ ದೇವರು ಹಾಗೂ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಗುವುದು. ಬಳಿಕ ಶ್ರೀಪಾದಂಗಳವರು ಬೃಂದಾವನದಲ್ಲಿ ಸನ್ನಿಹಿತರಾಗಿರುವ ತಮ್ಮ ಪರಂಪರೆಯ ಪೂರ್ವಗುರುಗಳಾದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ಮೂಲ ಬೃಂದಾವನದ ದರ್ಶನಾಶೀರ್ವಾದ ಪಡೆಯಲಿದ್ದಾರೆ. ಆನಂತರ ವಿದ್ವತ್ ಸಭಾ ಕಾರ್ಯಕ್ರಮವಿದೆ.
ಇದನ್ನೂ ಓದಿ: ವಿಸ್ತಾರ Explainer: Chandrayaan- 3; ಚಂದ್ರಯಾನ- 3ರ ವಿಶೇಷತೆಗಳು ಏನೇನು? ಏನಿದರ ಉದ್ದೇಶ?
ಜು.12ರಂದು ಶ್ರೀ ಸತ್ಯಧರ್ಮ ತೀರ್ಥರ ಅನುಗ್ರಹದೊಂದಿಗೆ ಶ್ರೀ ಸತ್ಯಾತ್ಮ ತೀರ್ಥರು ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಲಿದ್ದಾರೆ. ಉತ್ತರಾದಿ ಮಠಾಧೀಶರ ಈ ಚಾತುರ್ಮಾಸ್ಯ ಕಾರ್ಯಕ್ರಮ ಜು.12ರಿಂದ ಸೆ.29ರವರೆಗೆ ಹೊಳೆಹೊನ್ನೂರಿನಲ್ಲಿ ನಡೆಯಲಿದೆ. 80 ದಿನಗಳ ಈ ಅದ್ಧೂರಿಯ ಕಾರ್ಯಕ್ರಮದಲ್ಲಿ ನಾಡಿನ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿದಿನ ಶ್ರೀಗಳಿಂದ ಸಂಸ್ಥಾನ ದೇವರ ಪೂಜೆ, ವಿವಿಧ ವಿದ್ವಾಂಸರಿಂದ ಪ್ರವಚನ, ಹಬ್ಬ ಹರಿದಿನಗಳಂದು ವಿಶೇಷ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನಾ ಮಂಡಳಿಗಳಿಂದ ಭಜನೆ, ಲೋಕಕಲ್ಯಾಣಾರ್ಥ ಹೋಮ ಹವನಾದಿಗಳು ನಡೆಯಲಿವೆ. ನಿತ್ಯವೂ ನಡೆಯುವ ವಿದ್ವತ್ ಸಭೆಯ ಕೊನೆಯಲ್ಲಿ ಶ್ರೀ ಸತ್ಯಾತ್ಮ ತೀರ್ಥರು ಅನುಗ್ರಹ ಸಂದೇಶ ನೀಡಲಿದ್ದಾರೆ.
ಇದನ್ನೂ ಓದಿ: Ambani to Shiv Nadar : ಭಾರತದ 7 ಬಿಲಿಯನೇರ್‌ಗಳ ವಿದ್ಯಾರ್ಹತೆ ಏನು?
ಚಾತುರ್ಮಾಸ್ಯ ಕುರಿತು ಮಾಹಿತಿಗಾಗಿ ಶ್ರೀನಿವಾಸಾಚಾರ್ಯ ನವರತ್ನ 9481064750, ಪುರುಷೋತ್ತಮಾಚಾರ್ಯ ನವರತ್ನ —9483721572 , ರಘೂತ್ತಮಾಚಾರ್ಯ ಸೊಂಡೂರ್ 8762406466 ಇವರನ್ನು ಸಂಪರ್ಕಿಸಲು ವ್ಯವಸ್ಥಾಪನಾ ಸಮಿತಿ ಮನವಿ ಮಾಡಿದೆ.
ಇದನ್ನೂ ಓದಿ: Bangalore University : ನಾಳೆ ಬೆಂಗಳೂರು ವಿವಿ ಬಂದ್! ತರಗತಿ ಬಾಯ್ಕಾಟ್
ಈ ಬಾರಿ 80 ದಿನ ಚಾತುರ್ಮಾಸ್ಯ
ಈ ಸಂವತ್ಸರದಲ್ಲಿ ಶ್ರಾವಣ ಮಾಸ ಅಧಿಕ ಮಾಸ ಬಂದಿರುವುದರಿಂದ ಚಾತುರ್ಮಾಸ್ಯದ ಅವಧಿಯೂ ವಿಸ್ತಾರವಾಗಿದೆ. ಸಾಮಾನ್ಯವಾಗಿ 52 ದಿನಗಳ ಕಾಲ ನಡೆಯುವ ಚಾತುರ್ಮಾಸ್ಯ ಅಧಿಕ ಮಾಸದ ಕಾರಣದಿಂದ 80 ದಿನಗಳ ಕಾಲ ನಡೆಯಲಿದೆ. ಅಧಿಕ ಮಾಸದಲ್ಲಿ ಮಾಡುವ ಧಾರ್ಮಿಕ ಕೆಲಸಗಳು ವಿಶೇಷ ಪುಣ್ಯ ನೀಡಲಿದೆ ಎಂಬ ನಂಬಿಕೆ ಇದೆ. ಹೀಗಾಗಿ ಅಧಿಕ ಮಾಸದ ಸಂದರ್ಭದಲ್ಲಿ ಶ್ರೀಗಳು ಈ ಭಾಗದಲ್ಲಿ ವ್ರತ ಕೈಗೊಂಡಿರುವುದು ಭಕ್ತರ ಸಂತಸವನ್ನು ಇಮ್ಮಡಿಗೊಳಿಸಿದೆ ಮತ್ತು ಗುರುಗಳ ಸೇವೆಗೆ ವಿಶೇಷ ಅವಕಾಶವೂ ದೊರಕಿದಂತಾಗಿದೆ.