Site icon Vistara News

Shivamogga News: ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಪ್ರತ್ಯಕ್ಷವಾದ ನಾಗರಹಾವು!

cobra found in a school student s bag at Ripponpet

ರಿಪ್ಪನ್‌ಪೇಟೆ: ‌ಶಾಲಾ ವಿದ್ಯಾರ್ಥಿಯೋರ್ವನ (School Student) ಬ್ಯಾಗ್‌ನಲ್ಲಿ ನಾಗರಹಾವು (Cobra) ಪ್ರತ್ಯಕ್ಷವಾದ ಘಟನೆ ಜರುಗಿದ್ದು, ರಿಪ್ಪನ್‌ಪೇಟೆ (Ripponpet) ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಭುವನ್ ಬ್ಯಾಗಿನಲ್ಲಿ ನಾಗರಹಾವು ಕಂಡುಬಂದಿದೆ.

ಶುಕ್ರವಾರ ಬೆಳಗ್ಗೆ ವಿದ್ಯಾರ್ಥಿ ಭುವನ್ ಬ್ಯಾಗ್‌ನಿಂದ ಪುಸ್ತಕ ಹೊರತೆಗೆದಾಗ ಬ್ಯಾಗ್‌ನಲ್ಲಿದ್ದ ನಾಗರಹಾವನ್ನು ಕಂಡು ಆತಂಕಗೊಂಡಿದ್ದಾನೆ. ತನ್ನ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಆರ್. ಮಣಿಕಂಠ ಅವನಿಗೆ ಬ್ಯಾಗ್‌ನಲ್ಲಿ ಇರುವ ಹಾವನ್ನು ತೋರಿಸಿದ್ದಾನೆ. ಹಾವನ್ನು ಕಂಡ ತಕ್ಷಣವೇ ಮಣಿಕಂಠ ಬ್ಯಾಗಿನ ಜಿಪ್ ಎಳೆದು ಹಾವು ಹೊರಬರದಂತೆ ಮಾಡಿದ್ದಾನೆ. ನಂತರ ಬ್ಯಾಗ್‌ ಸಮೇತ ಶಿಕ್ಷಕರ ಬಳಿ ಬಂದು ಇದರಲ್ಲಿ ಹಾವು ಇದೆ ಎಂದು ತಿಳಿಸಿದ್ದಾನೆ.

ಇದನ್ನೂ ಓದಿ: Aditya- L1 : ಆದಿತ್ಯ ಎಲ್​1 ಮಿಷನ್​ನ ಉಡಾವಣೆಯ ಮೊದಲ ಚಿತ್ರಗಳು ಹೀಗಿವೆ

ವಿದ್ಯಾರ್ಥಿಯ ಮಾತಿಗೆ ಚಕಿತರಾದ ಶಿಕ್ಷಕರು ಬ್ಯಾಗನ್ನು ಹೊರತಂದು ತೆರೆದು ನೋಡಿದಾಗ ಅದರಲ್ಲಿ ಸದ್ದಿಲ್ಲದೆ ಸುರುಳಿ ಸುತ್ತಿಕೊಂಡು ಬೇಟೆಗಾಗಿ ಕಾದು ಕುಳಿತ ನಾಗರ ಹಾವನ್ನು ಕಂಡು ಬೆಚ್ಚಿ ಬೀಳುವ ಸರದಿ ಶಿಕ್ಷಕರದ್ದಾಗಿತ್ತು. ಶಾಲೆಯ ಕೂಗಳತೆ ದೂರದಲ್ಲಿದ್ದ ವಿದ್ಯಾರ್ಥಿ ಭುವನ್ ಮನೆಯಿಂದ ಪೋಷಕರನ್ನು ಕರೆಯಿಸಿದ ಶಿಕ್ಷಕರು, ಘಟನೆಯ ನೈಜತೆ ಹಾಗೂ ಸಹಪಾಠಿ ಮಣಿಕಂಠನ ಸಮಯ ಪ್ರಜ್ಞೆಯನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು ನಂತರ ಪೋಷಕರ ಸಮ್ಮುಖದಲ್ಲಿ ಬ್ಯಾಗಿನಲ್ಲಿದ್ದ ವಿಷಪೂರಿತ ನಾಗರಹಾವನ್ನು ಶಿಕ್ಷಕ ವೃಂದ ಜತೆಗೂಡಿ ಸಮೀಪದ ಕಾಡಿಗೆ ಬಿಟ್ಟು ಬಂದಿದ್ದಾರೆ.

ಶಾಲಾ ಬ್ಯಾಗಿನಲ್ಲಿ ಬಂದಿದ್ದ ನಾಗರಹಾವು ಯಾರಿಗೂ ಗಂಡಾಂತರ ತರದೆ ಸುಖಾಂತ್ಯವಾಗಿ ಕಾಡು ಸೇರಿದೆ. ವಿದ್ಯಾರ್ಥಿ ಮಣಿಕಂಠನ ಸಮಯಪ್ರಜ್ಞೆಗೆ ಗ್ರಾಮಸ್ಥರು ಹಾಗೂ ಶಿಕ್ಷಕರು ಪ್ರಸಂಶಿಸಿದ್ದಾರೆ.

Exit mobile version