ಸಾಗರ: ಕಾಂಗ್ರೆಸ್ (Congress) ಪ್ರಣಾಳಿಕೆಯಲ್ಲಿ ನೀಡಿದ ಐದು ಗ್ಯಾರೆಂಟಿ ಪೈಕಿ ಮಹಿಳೆಯರಿಗೆ (Women) ಉಚಿತ ಬಸ್ ಪ್ರಯಾಣ (Free bus travel) ಭರವಸೆ ಮಾತ್ರ ಈಡೇರಿಸಿದೆ. ಉಳಿದ ನಾಲ್ಕು ಭರವಸೆಗಳನ್ನು ಈತನಕ ಈಡೇರಿಸದೆ ಜನರನ್ನು ವಂಚಿಸುವ ಕೆಲಸ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಸೌಲಭ್ಯವಿಲ್ಲ. ಗ್ರಾಮೀಣ ಭಾಗದಲ್ಲೂ ಸರ್ಕಾರಿ ಬಸ್ ಸಂಚರಿಸುತ್ತಿಲ್ಲ. ಇಂತಹ ಕಡೆಗಳಲ್ಲಿ ರಾಜ್ಯ ಸರ್ಕಾರ ಖಾಸಗಿ ಬಸ್‍ಗಳ ಜತೆ ಒಪ್ಪಂದ ಮಾಡಿಕೊಂಡು ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Pink WhatsApp Scam: ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದೀರಾ? ಹಾಗಾದ್ರೆ ನಿಮ್ಮ ಫೋನ್ ಹ್ಯಾಕ್ ಆಗಿರಬಹುದು, ಚೆಕ್ ಮಾಡ್ಕೊಳ್ಳಿ
ಕೆ.ಎಸ್.ಆರ್.ಟಿ.ಸಿ. ಬಸ್‍ನಲ್ಲಿ ಸಂಚರಿಸುವ ಮಹಿಳೆಯರು ಮಾತ್ರ ಕಾಂಗ್ರೆಸ್‍ಗೆ ಮತ ಹಾಕಿಲ್ಲ. ಖಾಸಗಿ ಬಸ್‍ನಲ್ಲಿ ಓಡಾಡುವವರು ಸಹ ಮತ ಹಾಕಿದ್ದಾರೆ. ಸರ್ಕಾರ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಬಸ್ ಇಲ್ಲದ ಕಡೆ ಖಾಸಗಿ ಬಸ್‍ನಲ್ಲಿ ಮಹಿಳೆಯರು ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎನ್ನುವ ಧೋರಣೆ ರಾಜ್ಯ ಸರ್ಕಾರ ಕೈಬಿಡಬೇಕು. ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಸರ್ಕಾರಿ ಬಸ್‍ನಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದ್ದು ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು ಎಂದರು.
ಈಗಾಗಲೆ ಕೇಂದ್ರ ಸರ್ಕಾರ ದೇಶದ ಬಡವರಿಗೆ ಉಚಿತವಾಗಿ ಐದು ಕೆ.ಜಿ. ಅಕ್ಕಿಯನ್ನು ಕೊಡುತ್ತದೆ. ಕಾಂಗ್ರೆಸ್ 10 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಈಗ ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದು ಮೊಸಳೆ ಕಣ್ಣೀರು ಹಾಕುತ್ತಿದೆ. ಮತದಾರರು ಕಾಂಗ್ರೆಸ್ ನಂಬಿ ಮತ ನೀಡಿದ್ದಾರೆ. ಈಗ ಬೇರೆ ಬೇರೆ ಕಾರಣ ಹೇಳಿ ಜನರನ್ನು ವಂಚಿಸುವುದು ಸರಿಯಲ್ಲ. ಎಲ್ಲ ಪದವೀಧರರಿಗೆ 3 ಸಾವಿರ ರೂ., ಡಿಪ್ಲೊಮೋ ಪದವೀಧರರಿಗೆ 1500 ರೂ. ಕೊಡುತ್ತೇವೆ ಎಂದು ಘೋಷಣೆ ಮಾಡಿ ಈಗ 2022-23ನೇ ಸಾಲಿನಲ್ಲಿ ಪಾಸಾದವರಿಗೆ ಮಾತ್ರ ಸೌಲಭ್ಯ ಎಂದು ಹೇಳುತ್ತಿರುವುದು ಸರಿಯಲ್ಲ. ಎಲ್ಲ ಪದವೀಧರ ನಿರುದ್ಯೋಗಿಗಳಿಗೂ ಕಾಂಗ್ರೆಸ್ ನೀಡಿದ ಗ್ಯಾರೆಂಟಿಯಂತೆ ಹಣ ಖಾತೆಗೆ ಜಮೆ ಮಾಡಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: Congress Guarantee: ಗೃಹಜ್ಯೋತಿಯಲ್ಲ ಇದು ಸುಡುಜ್ಯೋತಿ: ವಿದ್ಯುತ್ ದರ ಅರ್ಧ ಕಡಿಮೆ ಮಾಡಿ ಎಂದ ಎಚ್.ಡಿ. ಕುಮಾರಸ್ವಾಮಿ
ಸರ್ಕಾರ ಬಂದು ಒಂದು ತಿಂಗಳಾಗಿದೆ. ಒಂದು ಗ್ಯಾರೆಂಟಿ ಮಾತ್ರ ಈಡೇರಿಸಿದ್ದು ಉಳಿದ ಗ್ಯಾರಂಟಿಯನ್ನು ಕಾಲಮಿತಿಯೊಳಗೆ ಜಾರಿಗೆ ತರಬೇಕು. ವಿದ್ಯುತ್ ದರವನ್ನು ಏಕಾಏಕಿ ಏರಿಸಿದ್ದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ತಕ್ಷಣ ವಿದ್ಯುತ್ ದರ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ಸರ್ಕಾರದ ವಿರುದ್ದ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಷ್ಟಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರ ಪಠ್ಯಗಳಿಗೆ ಕತ್ತರಿ ಹಾಕುತ್ತಿರುವುದು ಸಹ ಸರ್ಕಾರದ ಸಣ್ಣತನಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Kadaba News: ಚಿನ್ನದ ಅಂಗಡಿ ಉದ್ಘಾಟನೆ ದಿನವೇ ಶವವಾಗಿ ಪತ್ತೆಯಾದ ಯುವಕ
ಈ ಸಂದರ್ಭದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಅಧ್ಯಕ್ಷ ಗಣೇಶಪ್ರಸಾದ್, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಡಾ. ಧನಂಜಯ ಸರ್ಜಿ, ದೇವೇಂದ್ರಪ್ಪ ಇನ್ನಿತರರು ಹಾಜರಿದ್ದರು.