ಸೊರಬ: ಹೊಸದಾಗಿ ಅತಿಕ್ರಮಣ (encroachment) ಮಾಡಬೇಡಿ ಎಂದು ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರು ಮೇಲಿಂದ ಮೇಲೆ ಮನವಿ ಮಾಡುತ್ತಿರುವ ಬೆನ್ನಲ್ಲೇ ಸೊರಬ (Soraba) ತಾಲೂಕಿನ ಮುಟಗುಪ್ಪೆ ಗ್ರಾಪಂ ವ್ಯಾಪ್ತಿಯ ಹರಳಿಗೆ ಗ್ರಾಮವೂ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತೀರಾ ಈಚೆಗೆ ವ್ಯಾಪಕ ಅರಣ್ಯ (Forest) ನಾಶ ನಡೆದಿದೆ ಎಂದು ಪರಿಸರ ಜಾಗೃತಿ ಟ್ರಸ್ಟ್ ಆರೋಪಿಸಿದೆ.
ಈ ಪ್ರಕರಣಗಳ ಕುರಿತು ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಎಂದು ಸೊರಬಾದ ಪರಿಸರ ಜಾಗೃತಿ ಟ್ರಸ್ಟ್ ಆಗ್ರಹಿಸಿದೆ.
ಜಿಲ್ಲೆಯಲ್ಲಿ ಅತ್ಯಧಿಕ ಕಾನು ಪ್ರದೇಶವುಳ್ಳ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿರುವ ಅರಣ್ಯಗಳು ಹೀಗೆ ಏಕಾಏಕಿ ರಾತ್ರೋರಾತ್ರಿ ಬರಿದಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಇದನ್ನೂ ಓದಿ: Weather report : 4 ದಿನ ಮಳೆ ಅಬ್ಬರ; ದಕ್ಷಿಣ ಒಳನಾಡಿನಲ್ಲಿ ಚಕ್ಕರ್, ಕರಾವಳಿಯಲ್ಲಿ ಹಾಜರ್
ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಪಂ ವ್ಯಾಪ್ತಿಯ ಹರಳಿಗೆ ಗ್ರಾಮದ ಸನಂ 06 ರ ಸುಮಾರು 07 ಎಕರೆ ಪ್ರದೇಶದಲ್ಲಿದ್ದ ವಿನಾಶದ ಅಂಚಿನಲ್ಲಿರುವ ಕೊಡಸೆ, ಕಾಸರಕ, ಅಳಲೆ, ಹೊನ್ನೆ, ತಾರೆಯಂತಹ ಬೆಲೆ ಬಾಳುವ ಮರಗಳನ್ನು ಉರುಳಿಸಿ, ಬೆಂಕಿ ಹಚ್ಚಿ ದ್ವಂಸ ಮಾಡಲಾಗಿದೆ.
ಈ ಗ್ರಾಪಂ ವ್ಯಾಪ್ತಿಯಲ್ಲಿನ ಅಪರೂಪದ ಸಸ್ಯ ಕೊಡಸೆ ಗಿಡ ರಕ್ಷಣೆಗೆ ಗ್ರಾಪಂ ಹಾಗೂ ಅರಣ್ಯ ಇಲಾಖೆ ಮುಂದಾಗಿದೆ, ದೂಗೂರು ಗ್ರಾಪಂ ವ್ಯಾಪ್ತಿಯ ಹಲಸಿನಕೊಪ್ಪ ಗ್ರಾಮದಲ್ಲಿ ಕಾನು ರಕ್ಷಣೆಗೆ ಇಡೀ ಗ್ರಾಮವೇ ಹೋರಾಟ ನಡೆಸಿದೆ. ಸಂಬಂಧಪಟ್ಟ ಇಲಾಖೆಗಳು ತುಸು ಎಚ್ಚರವಹಿಸಿದ್ದರೆ ನಾಶವನ್ನು ತಡೆಗಟ್ಟಬಹುದಿತ್ತು. ಸ್ಥಳೀಯ ಜನತೆ ಎಚ್ಚೆತ್ತುಕೊಳ್ಳಬೇಕು. ಅರಣ್ಯ ರಕ್ಷಣೆಗೆ ಇಲಾಖೆಗಳೊಂದಿಗೆ ಸಹಕರಿಸಬೇಕು ಎಂದು ಪರಿಸರ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: IPL: ಲಕ್ನೋ ತಂಡಕ್ಕೆ ನೂತನ ಕೋಚ್ ನೇಮಕ
ನಾಶಗೊಂಡ ಪ್ರದೇಶಕ್ಕೆ ಕೂಡಲೆ ಸಾಗರ ಡಿಸಿಎಫ್ ಭೇಟಿ ನೀಡಿ ಜೀವವೈವಿಧ್ಯ, ಅರಣ್ಯ ಕಾಯಿದೆ ಉಲ್ಲಂಘನೆ ಆಗಿರುವುದನ್ನು ಗಮನಿಸಿ ತುರ್ತು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ವೃಕ್ಷಲಕ್ಷ ಆಂದೋಲನ ಮತ್ತು ಪರಿಸರ ಜಾಗೃತಿ ಟ್ರಸ್ಟ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Central Bank Recruitment 2023 : 1000 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ
ಜಿಲ್ಲಾಧಿಕಾರಿಗಳು ಈ ಪ್ರಕರಣದ ಹಿನ್ನೆಲೆಯಲ್ಲಿ ಸಾಗರದ ಡಿಸಿಎಫ್ ಹಾಗೂ ಸೊರಬ ತಹಶಿಲ್ದಾರರಿಗೆ ಕ್ರಮ, ಪರಿಶೀಲನೆಗೆ ಸೂಚಿಸಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.
ಹರಳಿಗೆ ಸನಂ 06 ರ ಅತಿಕ್ರಮಣದಲ್ಲಿ ಮರಕಡಿತಲೆಗೆ ಇಲಾಖೆ ಕ್ರಮಕೈಗೊಂಡಿದೆ. ತಾಲೂಕು ಅರಣ್ಯ ಅತಿಕ್ರಮಣ ವಿಷಯದಲ್ಲಿ ಇಲಾಖೆ ತೀವ್ರ ನಿಗಾ ಇರಿಸಿದ್ದು, ಅರಣ್ಯ ರಕ್ಷಣೆಗೆ ಸಾರ್ವತ್ರಿಕವಾಗಿ ಕೈಜೋಡಿಸಿ ಹವಾಮಾನ ವೈಪರೀತ್ಯತೆಯನ್ನು ನಿಯಂತ್ರಿಸಿಕೊಳ್ಳಬೇಕು.
-ಜಾವೀದ್ ಅಂಗಡಿ, ವಲಯಾರಣ್ಯಾಧಿಕಾರಿ, ಸೊರಬ ಅರಣ್ಯ ಇಲಾಖೆ.
ಹೊಸದಾಗಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಲು ಅವಕಾಶ ಇಲ್ಲದಿದ್ದರೂ ಮೇಲಿಂದ ಮೇಲೆ ಅತಿಕ್ರಮಣ ನಡೆಯುತ್ತಿದ್ದು ಇಂತಹ ಅತಿಕ್ರಮಣ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಾಕೃತಿಕ ಅಸಮತೋಲನ ತಡೆಗಟ್ಟಲು ಸಾರ್ವಜನಿಕರ ಸಹಕಾರ ಬೇಕು.
-ಎಂ.ಆರ್.ಪಾಟೀಲ್ ವಕೀಲರು, ಅಧ್ಯಕ್ಷರು, ಪರಿಸರ ಜಾಗೃತಿ ಟ್ರಸ್ಟ್ ಸೊರಬ.