ಸೊರಬ: ವಿದ್ಯಾರ್ಥಿಗಳು (Students) ಶಿಸ್ತು (Discipline) ಮತ್ತು ಸಮಯ ಪ್ರಜ್ಞೆ (Time consciousness) ಮೈಗೂಡಿಸಿಕೊಳ್ಳಿ ಎಂದು ಮಲೆನಾಡು ಸಿರಿ ಸೇವಾ ಬಳಗದ ಮುಖ್ಯಸ್ಥ ರಾಜು ಹಿರಿಯಾವಲಿ ಹೇಳಿದರು.
ಶುಕ್ರವಾರ ಮಲೆನಾಡು ಸಿರಿ ಸೇವಾ ಬಳಗದ ವತಿಯಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಯೋಧರೊಡನೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ನಿವೃತ್ತ ಯೋಧರೊಡನೆ ತಮ್ಮಲ್ಲಿರುವ ದೇಶಾಭಿಮಾನ ಮತ್ತು ಸೈನಿಕರ ಕುರಿತಾದ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ. ಇದರಿಂದ ರಾಷ್ಟ್ರ ರಕ್ಷಣೆಗಾಗಿ ಕಂಕಣಬದ್ಧರಾದ ಸೈನಿಕರ ಕಷ್ಟಕಾರ್ಪಣ್ಯಗಳ ಅರಿವು ವಿದ್ಯಾರ್ಥಿಗಳಿಗೆ ಇಂತಹ ಸಂವಾದ ಕಾರ್ಯಕ್ರಮದಿಂದ ದೊರಕಲಿದೆ ಎಂದರು.
ಇದನ್ನೂ ಓದಿ: Ind vs wi : ವಿಂಡೀಸ್ ವಿರುದ್ಧ ಏಕ ದಿನ ಸರಣಿ ಗೆಲುವು ಭಾರತದ ಗುರಿ
ನಿವೃತ್ತ ಯೋಧ ಎಚ್. ಭೀಮಪ್ಪ ಮಾತನಾಡಿ, ಸೈನಿಕರಂತೆ ವಿದ್ಯಾರ್ಥಿಗಳಲ್ಲಿಯೂ ದೇಶಭಕ್ತಿಯ ತುಡಿತ ಹೆಚ್ಚಾಗಬೇಕು. ಸೈನಿಕರು ಅವರ ಕುಟುಂಬದಿಂದ ವರ್ಷಾನುಗಟ್ಟಲೆ ದೂರವಿದ್ದು ದೇಶ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ ಅವರನ್ನು ಗೌರವಿಸುವುದರಿಂದ ಸೈನಿಕರ ಮನೋಬಲ ಹೆಚ್ಚುತ್ತದೆ ಎಂದರು.
ಮತ್ತೊಬ್ಬ ನಿವೃತ್ತ ಯೋಧ ಎಚ್.ಎಂ. ಸದಾಶಿವಪ್ಪ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ರಾಷ್ಟ್ರ ಭಕ್ತಿಯ ಕಿಚ್ಚು ಜಾಗೃತಗೊಂಡಲ್ಲಿ ದೇಶ ಸುಭದ್ರವಾಗಿರುತ್ತದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ವೀರೇಶ್ ಮೇಸ್ತ್ರಿ ಕಾರ್ಯಕ್ರಮ ಉದ್ಘಾಟಿಸಿದರು.
ನಿವೃತ್ತ ಯೋಧರಾದ ಎಚ್. ಭೀಮಪ್ಪ ಮತ್ತು ಎಚ್.ಎಂ. ಸದಾಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮಾರುತಿ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: ಸಂಜು ಸ್ಯಾಮ್ಸನ್ ಜೆರ್ಸಿಯಲ್ಲಿ ಕಣಕ್ಕಿಳಿದ ಸೂರ್ಯಕುಮಾರ್; ಇದರ ಹಿಂದಿದೆ ಟ್ವಿಸ್ಟ್!
ಈ ಸಂದರ್ಭದಲ್ಲಿ ಪತ್ರಕರ್ತ ಎಂ.ಎಲ್. ನೋಪಿ ಶಂಕರ, ಸಹ ಶಿಕ್ಷಕಿಯರಾದ ಶಾಂತ, ವಸಂತಕುಮಾರಿ, ಪ್ರತಿಭಾ, ರಾಘವೇಂದ್ರ ಸೇರಿದಂತೆ ವಿದ್ಯಾರ್ಥಿಗಳಿದ್ದರು. ಶಿಕ್ಷಕಿ ಮಂಗಳಾ ಹೆಗಡೆ ನಿರೂಪಿಸಿದರು. ಭುವನೇಶ್ವರಿ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ನಾಗರಾಜ್ ಸ್ವಾಗತಿಸಿದರು, ಶಿಕ್ಷಕಿ ಉಷಾ ಭಟ್ ವಂದಿಸಿದರು.